ಕರ್ನಾಟಕ

karnataka

ETV Bharat / entertainment

ಟ್ವಿಟರ್​ ಖಾತೆ ಅಮಾನತು: ನಟ ಕಿಶೋರ್ ಸ್ಪಷ್ಟನೆ ಹೀಗಿದೆ..​ - ETV Bharath Kannada news

ನಾನು ಪೋಸ್ಟ್​ ಹಾಕಿದ್ದಕ್ಕಾಗಿ ಖಾತೆ ಅಮಾನತಾಗಿಲ್ಲ ಎಂದು ನಟ ಕಿಶೋರ್​ ಪ್ರತಿಕ್ರಿಯಿಸಿದ್ದಾರೆ.

actor kishor reacted  twitter account suspended
ಕಿಶೋರ್​

By

Published : Jan 5, 2023, 7:19 AM IST

ಜನವರಿ 2ರಂದು ನಟ ಕಿಶೋರ್​ ಅವರ ಅವರ ಟ್ವಿಟರ್​ ಖಾತೆ ಅಮಾನತಿಗೆ ಒಳಗಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಏಕೆಂದರೆ ಕಿಶೋರ್​ ಪ್ರಗತಿಪರ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ಅವರ ಖಾತೆ ಸಸ್ಪೆಂಡ್​ ಆಗಿತ್ತು ಎಂದು ಹೇಳಲಾಗಿತ್ತು. ಆದರೆ ಇವೆಲ್ಲವೂ ಊಹಾಪೋಹಗಳಾಗಿದ್ದವೇ ಹೊರತು ನಿಜವಾದ ಸಂಗತಿ ಏನೆಂಬುದು ತಿಳಿದಿರಲಿಲ್ಲ.

'ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು' ಎನ್ನುವ ವಿಡಿಯೋವೊಂದು ವೈರಲ್​ ಆಗಿತ್ತು. ಈ ಬಗ್ಗೆ ಫೇಸ್‌ಬುಕ್​ ಮತ್ತು ಟ್ವಿಟರ್​ ಖಾತೆಯಲ್ಲಿ ಕಿಶೋರ್ ​ತಮ್ಮ ಅಭಿಪ್ರಾಯ ಹಂಚಿಕೊಂಡು, 'ಕಾಂತಾರ ಸಿನಿಮಾದ ಭಾಗವಾಗಿ ಈ ರೀತಿಯ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ?' ಎಂದಿದ್ದರು.

'ಕಥೆಗಾರನಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೇ. ಸಿನಿಮಾವಾಗಲಿ ಪುರಾಣವಾಗಲಿ, ದೈವವೋ, ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ ಬೇಡ' ಎಂದು ಅಭಿಪ್ರಾಯಿಸಿದ್ದರು.

ಟ್ವಿಟರ್​ ಖಾತೆ ಅಮಾನತಿನ ಬಗ್ಗೆ ಸ್ಪಷ್ಟನೆ ನೀಡಿದ ಕಿಶೋರ್

ಇದಾದ ನಂತರ, ಕಿಶೋರ್​ ಅವರ ಖಾತೆಯನ್ನು ಟ್ವಿಟರ್​ನಲ್ಲಿ ಹುಡುಕಿದಾಗ ಸಸ್ಪೆಂಡ್​ ಎಂದು ಬರುತ್ತಿತ್ತು. ಇದರಿಂದಾಗಿ ಈ ವಿಚಾರ ಹಂಚಿಕೊಂಡ ಕಾರಣವೇ ಇವರ ಖಾತೆ ಅಮಾನತಾಗಿದೆ ಎಂದು ಹೇಳಲಾಗಿತ್ತು. 'ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೇ. ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟ್​ನಿಂದಲೂ ಅಲ್ಲ. ಡಿಸೆಂಬರ್ 20 ನೇ ತಾರೀಖು 2022 ರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆಯನ್ನು ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು' ಎಂದು ಟ್ವಿಟರ್​ ಕಳಿಸಿದ ಸಂದೇಶವನ್ನು ಮತ್ತು ಸಸ್ಪೆಂಡ್​ ಆದ ಫೋಟೋವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡು ಬರೆದುಕೊಂಡಿದ್ದಾರೆ.

ಟ್ವಿಟರ್​ ಮತ್ತು ಫೇಸ್‌ಬುಕ್​ನಲ್ಲಿ ಕಿಶೋರ್​ ಸಕ್ರಿಯರಾಗಿದ್ದಾರೆ. ಸಾಮಾಜಿಕ ವಿಚಾರಗಳು ಮತ್ತು ಚಿತ್ರರಂಗದ ವಿಚಾರಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ​ಕಾಂತಾರ ಸಿನಿಮಾ ಬಗ್ಗೆ ಆದಿನಗಳು ನಟ ಚೇತನ್ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದಿದ್ದಕ್ಕೆ ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ. ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ? ಎಂದು ಅವರು ಪ್ರಶ್ನೆ ಮಾಡಿದ್ದರು.

ಅಲ್ಲದೇ ಸಾಯಿ ಪಲ್ಲವಿ ಅವರು ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಮುಸ್ಲಿಂ ಸಮುದಾಯದವರ ಮೇಲಿನ ಹಲ್ಲೆ ಒಂದೇ ಅಲ್ಲವೇ ಎರಡೂ ಜೀವಗಳೇ ಅಲ್ಲವೇ ಎಂದು ಹೇಳಿದ್ದಕ್ಕೂ ಅವರ ಪರವಾಗಿ ನಿಂತಿದ್ದರು. ಫ್ರೀ ವ್ಯಾಕ್ಸಿನೇಶನ್​ ಕೊಡುವುದಾಗಿ ಪ್ರಧಾನಿ ಮೋದಿ ಹೇಳಿದಾಗ ಅದಕ್ಕೂ ಧನ್ಯವಾದ ಅರ್ಪಿಸಿ ಫೇಸ್​ಬುಕ್​ ಮತ್ತು ಟ್ವಿಟರ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು.

ಇದನ್ನೂ ಓದಿ:ನಂಬಿಕೆ ಇರಲಿ ಮೂಢ ನಂಬಿಕೆ ಬೇಡ ಅಂತಾ ನಟ ಕಿಶೋರ್ ಹೇಳಿದ್ಯಾಕೆ?: ನಟನ ಟ್ವಿಟ್ಟರ್ ಖಾತೆ ಸಸ್ಪೆಂಡ್

For All Latest Updates

ABOUT THE AUTHOR

...view details