ಸಿನಿಮಾವೆಂಬ ಬಣ್ಣದ ಲೋಕಕ್ಕೆ ನಟ, ನಿರ್ದೇಶಕರು ಹಾಗೂ ನಿರ್ಮಾಪಕರ ಮಕ್ಕಳು ಬರೋದು ಹೊಸತೇನಲ್ಲ. ಇದೀಗ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಹುಭಾಷೆಯಲ್ಲಿ ತನ್ನ ಅಮೋಘ ಅಭಿನಯದಿಂದ ಹೆಸರು ಗಳಿಸಿರುವ ನಟ ಕಿಚ್ಚ ಸುದೀಪ್ ಅವರ ಕುಟುಂಬದ ಕುಡಿಯೊಂದು ಬೆಳ್ಳಿ ತೆರೆಯಲ್ಲಿ ಮಿಂಚಲು ರೆಡಿಯಾಗಿದೆ. ಹಾಗಾದ್ರೆ, ಸುದೀಪ್ ಮಗಳು ಸಾನ್ವಿ ಸಿನಿಮಾಗೆ ಬರ್ತಾ ಇದ್ದಾರೆ? ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಕಿಚ್ಚನ ಅಕ್ಕ ಸುಜಾತ ಅವರ ಮಗ ಸಂಚಿತ್ ಸಂಜೀವ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲಿದ್ದಾರೆ.
ಹೌದು, ಮಾವ ಕಿಚ್ಚ ಸುದೀಪ್ ಹಾದಿಯಲ್ಲಿ ನಡೆಯಲು ಅಳಿಯ ಸಂಚಿತ್ ಸಜ್ಜಾಗಿದ್ದಾರೆ. ಸಂಚಿತ್ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ನಾಲ್ಕೈದು ವರ್ಷಗಳಿಂದ ಕೇಳಿ ಬರುತ್ತಿತ್ತು. ಅದೇ ರೀತಿ ಸುದೀಪ್ ಕೂಡ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಇವೆಂಟ್ಗೆ ಹೋದರು ಜೊತೆಯಲ್ಲಿ ಅಕ್ಕನ ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಅಂದೇ ಕೆಲವರು ಸುದೀಪ್ನಂತೆ ಸಂಚಿತ್ ಕೂಡ ಸಿನಿಮಾಗೆ ಬರ್ತಾರೆ ಎಂದುಕೊಂಡಿದ್ರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.
ಒಂದು ಇಂಟ್ರೆಸ್ಟ್ರಿಂಗ್ ವಿಚಾರ ಅಂದ್ರೆ, ಸಂಚಿತ್ ಸಂಜೀವ್ ಅಭಿನಯದ ಜೊತೆಗೆ ನಿರ್ದೇಶನ ಮಾಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರೋ ಸಂಚಿತ್, "ನನಗೆ ಕಾಲೇಜು ದಿನಗಳಿಂದಲೂ ಸಿನಿಮಾ ಬಗ್ಗೆ ಒಲವು ಇತ್ತು, ರಂಗಭೂಮಿಯಲ್ಲಿ ಒಂದಿಷ್ಟು ನಾಟಕಗಳನ್ನು ಮಾಡಿದ್ದೇನೆ. ಇದರ ಜೊತೆಗೆ, ನ್ಯೂಯಾರ್ಕ್‌ನ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ, ಡ್ಯಾನ್ಸ್, ಕ್ಯಾಮರಾ ಮುಂದೆ ಹೇಗೆ ಅಭಿನಯ ಮಾಡಬೇಕು ಎಂಬುದರ ಬಗ್ಗೆ ಎರಡು ವರ್ಷ ತರಬೇತಿ ಪಡೆದಿದ್ದೇನೆ" ಎಂದರು.
ನಿರ್ದೇಶನದ ವಿಷಯಕ್ಕೆ ಬಂದರೆ ಮಾಣಿಕ್ಯ ಚಿತ್ರದಲ್ಲಿ ಸಂಚಿತ್ ಕೆಲಸ ಮಾಡಿದ್ದಾರೆ. ಜೊತೆಗೆ 'ಜಿಗರ್‌ಥಂಡಾ’ ಚಿತ್ರದ ಪ್ರೀ ಪ್ರೊಡಕ್ಷನ್ ಹಂತದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಗೂ 'ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ಕೋ ಡೈರೆಕ್ಟರ್ ಕೆಲಸ ಮಾಡಿದ್ದಾರೆ. ಇದೀಗ ತಮ್ಮ ಚಿತ್ರದಲ್ಲಿ ನಟನೆ ಜೊತೆಗೆ ಡೈರೆಕ್ಷನ್ ಕೂಡ ಮಾಡ್ತಾ ಇದ್ದು, ಇದಕ್ಕೆ ಸುದೀಪ್ ಅವರ ಸಪೋರ್ಟ್ ಇದೆ. ಈ ಸಿನಿಮಾವನ್ನು ಕೆ ಪಿ ಶ್ರೀಕಾಂತ್, ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ.