ಹಾಲಿವುಡ್ ನಟ ಮತ್ತು ಮಾರ್ವೆಲ್ ಸ್ಟಾರ್ ಜೆರೆಮಿ ರೆನ್ನರ್ (Jeremy Renner) ಹೊಸ ವರ್ಷದ ವೇಳೆ ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆ ಜೆರೆಮಿ ರೆನ್ನರ್ ಹಲವು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ವೈದ್ಯರು ಜೆರೆಮಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಮನೆಗೆ ತಲುಪಿದ ಜೆರೆಮಿ ರೆನ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
30ಕ್ಕೂ ಹೆಚ್ಚು ಮೂಳೆಗಳ ಮುರಿತ:ಮಾರ್ವೆಲ್ ಸ್ಟಾರ್ ಶನಿವಾರದಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. 'ಮಾರ್ನಿಂಗ್ ವರ್ಕ್ ಔಟ್ಗಳು, ಈ ವಿಶೇಷ ಹೊಸ ವರ್ಷದಲ್ಲಿ ಕೆಲ ನಿರ್ಣಯಗಳು ಬದಲಾಗಿವೆ. ಇದು ನನ್ನ ಇಡೀ ಕುಟುಂಬಕ್ಕೆ ದುರಂತವಾಗಿತ್ತು. ನನ್ನ ಕುಟುಂಬ ಮತ್ತು ನನ್ನ ಬಗ್ಗೆ ಚಿಂತಿಸಿದ, ಆರೋಗ್ಯ ಸುಧಾರಿಸಲು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಎಲ್ಲರಿಗೂ ನನ್ನ ಕಡೆಯಿಂದ ಸಾಕಷ್ಟು ಪ್ರೀತಿ ಕಳುಹಿಸಲು ಬಯಸುತ್ತೇನೆ. ಕುಟುಂಬ ಮತ್ತು ಸ್ನೇಹಿತರೊಂದಿಗಿನ ಪ್ರೀತಿ ಮತ್ತು ಬಾಂಧವ್ಯವು ಗಾಢವಾಗುತ್ತಿದ್ದಂತೆಯೇ ಈ 30ಕ್ಕೂ ಹೆಚ್ಚು ಮುರಿದ ಮೂಳೆಗಳು ಗುಣವಾಗುತ್ತವೆ, ಬಲಗೊಳ್ಳುತ್ತವೆ. ನಿಮ್ಮೆಲ್ಲರಿಗೂ ನನ್ನ ಪ್ರೀತಿ ಮತ್ತು ಆಶೀರ್ವಾದಗಳು ಇವೆ ಎಂದು ಬರೆದುಕೊಂಡಿದ್ದಾರೆ.
ಜೆರೆಮಿ ರೆನ್ನರ್ ಅಪಘಾತ ?:ಹಾಲಿವುಡ್ ಚಿತ್ರರಂಗದ ಜನಪ್ರಿಯ ಚಲನಚಿತ್ರ ಅವೆಂಜರ್ಸ್‌ನಲ್ಲಿ ಪಾತ್ರವಹಿಸಿ ಖ್ಯಾತಿ ಗಳಿಸಿರುವ ನಟ ಹೊಸ ವರ್ಷದಲ್ಲಿದ ವೇಳೆ ಅಪಘಾತಕ್ಕೆ ಒಳಗಾದರು. ವರದಿಗಳ ಪ್ರಕಾರ, ಹೊಸ ವರ್ಷಕ್ಕೆ ಒಂದು ದಿನ ಮೊದಲು ನೆವಾಡಾ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿತ್ತು. ಈ ಭಾಗದಲ್ಲಿ 35,000ಕ್ಕೂ ಹೆಚ್ಚು ಮನೆಗಳಿದ್ದು, ಹಿಮಪಾತದಿಂದಾಗಿ ದಿನವಿಡೀ ವಿದ್ಯುತ್ ಕಡಿತಗೊಂಡಿತ್ತು.