ಹಾಲಿವುಡ್ ನಟ ಹೇಡನ್ ಪನೆಟ್ಟಿಯರ್ (Hayden Panettiere) ಅವರ ಸಹೋದರ ಮತ್ತು ದಿ ವಾಕಿಂಗ್ ಡೆಡ್ ಮತ್ತು ಐಸ್ ಏಜ್: ದಿ ಮೆಲ್ಟ್‌ಡೌನ್ ಚಿತ್ರದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದ ನಟ ಜಾನ್ಸೆನ್ ಪನೆಟ್ಟಿಯರ್ (Jansen Panettiere) ನ್ಯೂಯಾರ್ಕ್ ನಗರದಲ್ಲಿ ನಿಧನರಾಗಿದ್ದಾರೆ. 28 ವರ್ಷದ ನಟನ ಸಾವಿನ ಸುದ್ದಿಯನ್ನು ಹೇಡನ್‌ನ ಪ್ರತಿನಿಧಿಯಾದ ಕಸೆಯ್ ಕಿಚನ್ ದೃಢಪಡಿಸಿದ್ದಾರೆ. ನಟ ಜಾನ್ಸೆನ್ ಪನೆಟ್ಟಿಯರ್ ತಮ್ಮ ಕಿರಿ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವ ಸುದ್ದಿ ಚಿತ್ರರಂಗ, ಅಭಿಮಾನಿಗಳ ಕಂಬನಿಗೆ ಕಾರಣವಾಗಿದೆ.
ದಿ ವಾಕಿಂಗ್ ಡೆಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟ ಜಾನ್ಸನ್ ಪನೆಟ್ಟಿಯರ್ ಹೆಸರುವಾಸಿಯಾಗಿದ್ದರು. ಐಸ್ ಏಜ್: ದಿ ಮೆಲ್ಟ್‌ಡೌನ್ ಚಿತ್ರದ ಮೂಲಕವೂ ಫೇಮಸ್ ಆಗಿದ್ದರು. ಈವನ್ ಸ್ಟೀವನ್ಸ್, ದಿ ಎಕ್ಸ್, "ದಿ ಫೋರ್ಜರ್, ದಿ ಮಾರ್ಷಲ್ ಆರ್ಟ್ಸ್ ಚೈಲ್ಡ್, ಸಮ್ಮರ್ ಫಾರೆವರ್, ಮತ್ತು ಲವ್ ಅಂಡ್ ಲವ್ ನಾಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 2004ರ ಚಲನಚಿತ್ರ "ಟೈಗರ್ ಕ್ರೂಸ್"ನಲ್ಲಿ ತನ್ನ ಸಹೋದರಿಯೊಂದಿಗೂ ಅವರು ನಟಿಸಿದ್ದಾರೆ. ಮಿಡೋರಿಯ ನಿಂಟೆಂಡೊಲ್ಯಾಂಡ್ ಬೇಕರಿ, ಗ್ರ್ಯಾಂಡ್ ಸೆಂಟ್ರಲ್ ಬೆನೆಟ್ಸ್, ಬ್ಲೂಸ್ ಕ್ಲೂಸ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ನಟ ಹೇಡನ್ ಪನೆಟ್ಟಿಯರ್ ಆಹ್ ರೋಚ್ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಈ ಚಿತ್ರ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ಅಮೆರಿಕನ್ ಗೇಮ್ ಮತ್ತು ಹಾರ್ಸ್, ಜಸ್ಟೀಸ್ ಏಂಜೆಲ್ ಚಿತ್ರಗಳಲ್ಲಿ ಕೆಲಸ ಮಾಡಬೇಕಿತ್ತು.
ನಟಿ ಸುಬಿ ಸುರೇಶ್ ನಿಧನ: ಇನ್ನೂ ಇಂದು ಭಾರತದ ಇಬ್ಬರು ಕಲಾವಿದರು ಕೂಡ ನಿಧನರಾಗಿದ್ದಾರೆ. ಮಲೆಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಗುರತಿಸಿಕೊಂಡ ನಟಿ ಸುಬಿ ಸುರೇಶ್ ಅನಾರೋಗ್ಯ ಹಿನ್ನೆಲೆ ಕೊನೆಯುಸಿರೆಳೆದಿದ್ದಾರೆ. ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸುಬಿ ಸುರೇಶ್ ಅವರು ಎರ್ನಾಕುಲಂ ಜಿಲ್ಲೆಯ ಆಲುವ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 9:30ಕ್ಕೆ ನಿಧನ ಹೊಂದಿದ್ದಾರೆ.