ಕಾಂತಾರ ಕನ್ನಡ ಚಿತ್ರರಂಗವಲ್ಲದೇ ಪರ ಭಾಷೆಯಲ್ಲಿಯೂ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸುತ್ತಿರುವ ಸಿನಿಮಾ. ಈ ಚಿತ್ರವನ್ನು ಕನ್ನಡ ಪ್ರೇಕ್ಷಕರು, ಚಿತ್ರರಂಗದವರೂ ಅಲ್ಲದೇ ಪರಭಾಷೆಯ ನಟ-ನಟಿಯರು ಕೂಡ ನೋಡಿ ಕೊಂಡಾಡಿದ್ದಾರೆ.
ಇದೀಗ ಕನ್ನಡ ಚಿತ್ರರಂಗದ ನವರಸನಾಯಕ ಜಗ್ಗೇಶ್ ವಿದೇಶದಲ್ಲಿ ಕಾಂತಾರ ಸಿನಿಮಾ ನೋಡಿದ್ದಾರೆ. ಅಮೆರಿಕದಲ್ಲಿರುವ ಅವರು ಅಲ್ಲಿಯೇ ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ರಿಷಬ್ ಮಾಡಿದ ಚಿತ್ರ ಅಲ್ಲ, ದೇವರೇ ಮಾಡಿಸಿದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದ್ಭುತ ಸಿನಿಮಾ ಎಂದು ಕೊಂಡಾಡುವುದರ ಜೊತೆಗೆ, ಚಿತ್ರದಲ್ಲಿ ತಮಗೆ ಏನೆಲ್ಲಾ ಇಷ್ಟ ಆಯ್ತು ಎಂಬುದನ್ನೂ ತಿಳಿಸಿದ್ದಾರೆ.
ಇಂದು ಅಮೆರಿಕದಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು, ನೋಡಿ ಬಂದೆ. ನಾನು ದಕ್ಷಿಣ ಕನ್ನಡದ ದೇವಾಲಯಗಳ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆಯುವುದು ನನ್ನ 30 ವರ್ಷದ ಅಭ್ಯಾಸ. ನನ್ನ ಪ್ರಕಾರ, ಇದು ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ ಹಾಗು ನಿರ್ದೇಶಕ ಹುಟ್ಟಿಬಂದ?. ಎಂಥ ಅದ್ಭುತ ಕೊಡುಗೆ ಕನ್ನಡ ಚಿತ್ರರಂಗಕ್ಕೆ. ಕಡೆಯ 25 ನಿಮಿಷ ನಾನು ಎಲ್ಲಿರುವೆ ಅಂತ ಮರೆತೇ ಹೋಯಿತೆಂದು ಜಗ್ಗೇಶ್ ಗುಣಗಾನ ಮಾಡಿದ್ದಾರೆ.