ಕನ್ನಡ ಚಿತ್ರರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಸೂರೆಗೊಂಡಿರುವ ನಟ ಹರೀಶ್ ರಾಜ್. ಗನ್, ದ್ವೀಪ, ತಾಯಿ ಸಾಹೇಬ ಹೀಗೆ ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನಿ ರಸಿಕರನ್ನು ರಂಜಿಸಿರುವ, ಹರೀಶ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಸಂದಿವೆ. ತಮ್ಮ ಸಿನಿಪಯಣಕ್ಕೆ 25 ವಸಂತಗಳು ಪೂರೈಸಿರುವ ಈ ಹೊತ್ತಿನಲ್ಲಿ ಹರೀಶ್ ರಾಜ್ ಚಿಕ್ಕ ಸಮಾರಂಭವೊಂದನ್ನು ಆಯೋಜಿಸಿದ್ದರು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ, ನಿರ್ದೇಶಕ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕ ಮಧುಸೂದನ್ ಗೌಡ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಹರೀಶ್ ಕುಮಾರ್, 1997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ "ದೋಣಿ ಸಾಗಲಿ" ಚಿತ್ರದ ಮೂಲಕ ನನ್ನ ಸಿನಿಪಯಣ ಆರಂಭವಾಯಿತು. ಅದೇ ವರ್ಷ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ "ತಾಯಿ ಸಾಹೇಬ" ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದರಲ್ಲಿ ನಾನು ಜಯಮಾಲ ಅವರ ಮಗನ ಪಾತ್ರ ನಿರ್ವಹಣೆ ಮಾಡಿದ್ದೆ. ಇಂದಿನ ಸಮಾರಂಭಕ್ಕೆ ನನ್ನ ಮೊದಲ ಸಿನಿಮಾ ನಿರ್ಮಾಪಕರಾದ ಮಧುಸೂದನ್ ಗೌಡ ಅವರು, ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಸರ್, ಸುನೀಲ್ ಪುರಾಣಿಕ್ ಹಾಗೂ ಭಾ.ಮ.ಹರೀಶ್ ಸರ್ ಬಂದಿರುವುದು ತುಂಬಾ ಖುಷಿಯಾಗಿದೆ. ಅವರಿಗೆ ಅನಂತ ಧನ್ಯವಾದ. ನಾನು, ಸುನೀಲ್ ಪುರಾಣಿಕ್ ಅವರು ಫಣಿ ರಾಮಚಂದ್ರ ನಿರ್ದೇಶನದ "ದಂಡ ಪಿಂಡಗಳು" ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದೆವು. ಇದೆಲ್ಲಾ ನೆನಪಿಸಿಕೊಂಡರೆ ಇಷ್ಟು ಬೇಗ 25 ವರ್ಷಗಳು ಕಳೆದು ಹೋಯಿತಾ? ಅನಿಸುತ್ತದೆ. ಈ ಇಪ್ಪತ್ತೈದು ವರ್ಷಗಳಲ್ಲಿ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಡಿದ್ದೇನೆ. ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ರಾಜೇಂದ್ರ ಸಿಂಗ್ ಬಾಬು ಅವರಂತಹ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದೇನೆ. ಬಿಗ್ ಬಾಸ್ ನನಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತು. ನಾನು ಏನಾದರೂ ಈ ರಂಗದಲ್ಲಿ ಸಾಧನೆ ಮಾಡಿದ್ದೀನಿ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಹಾಗೂ ಮಾಧ್ಯಮದವರು. ಇಡೀ ಚಿತ್ರರಂಗಕ್ಕೆ ನಾನು ಚಿರ ಋಣಿ ಎಂದು ಹೇಳಿದರು.