ವಿಷ್ಣು ಸರ್ಕಲ್ ಸಿನಿಮಾ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ಮತ್ತೆ ನಾಯಕನಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಅರಸೀಕೆರೆಯ ಪುನೀತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು 'ಅಮರಾವತಿ ಪೊಲೀಸ್ ಸ್ಟೇಷನ್'.
ಬುಧವಾರದಂದು ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತು. ಸಿನಿಮಾದ ಮೊದಲ ದೃಶ್ಯಕ್ಕೆ ನಟ ಜಗ್ಗೇಶ್ ಅವರು ಕ್ಲಾಪ್ ಮಾಡಿ ಚಿತ್ರರಂಗಕ್ಕೆ ಶುಭ ಕೋರಿದರು. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ಪೊಲೀಸ್ ಸ್ಟೇಷನ್ ಸುತ್ತಮುತ್ತ ನಡೆಯುವ ಘಟನೆಗಳು ಚಿತ್ರದ ಪ್ರಮುಖ ಆಂಶಗಳಾಗಿವೆ.
ಈ ಸಿನಿಮಾ ಬಗ್ಗೆ ನಟ ಗುರುರಾಜ್ ಮಾತನಾಡಿ, ನಿರ್ದೇಶಕ ಪುನೀತ್ ಅವರು ಕಳೆದ 3 ವರ್ಷಗಳಿಂದ ಈ ಕಥೆ ರೆಡಿ ಮಾಡಿಕೊಂಡಿದ್ದಾರೆ. ಒಂದು ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇಟ್ಟುಕೊಂಡು, ಈ ಕಥೆ ರೆಡಿಯಾಗಿದೆ. ಕಥೆ ಕೇಳಿದ ತಕ್ಷಣ ಚಿತ್ರ ಮಾಡಬೇಕು ಎನಿಸಿತು ಎಂದು ಹೇಳಿದರು.
ಬಳಿಕ ನಿರ್ದೇಶಕ ಪುನೀತ್ ಮಾತನಾಡಿ, ರೈತರು, ಪ್ರೆಸ್ ಅಂಶಗಳನ್ನು ಇಟ್ಟುಕೊಂಡು ಈಗಿನ ಕಾಲದಲ್ಲಿ ಏನೇನು ನಡೆಯುತ್ತಿದೆಯೋ ಅದನ್ನೇ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ. ಮೈಸೂರು, ಬೆಂಗಳೂರು, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ ಎಂದರು.