ಉತ್ತಮ ನಟನೆ ಜೊತೆಗೆ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿರುವ ನಟ ಗುರ್ಮೀತ್ ಚೌಧರಿ ಇದೀಗ ರಸ್ತೆ ಬದಿ ಅಪರಿಚಿತರ ಜೀವ ಉಳಿಸಲು ಮುಂದಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಟನ ಮಾನವೀಯತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶ್ಲಾಘನೆ ವ್ಯಕ್ತವಾಗುತ್ತಿದೆ.
ರಸ್ತೆ ಬದಿ ಹೃದಯಾಘಾತಕ್ಕೊಳಗಾದ ಅಪರಿಚಿತ: ಮುಂಬೈನ ಅಂಧೇರಿ ಬಳಿ ಜನನಿಬಿಡ ಪ್ರದೇಶದಲ್ಲಿ ಹೃದಯಾಘಾತಕ್ಕೊಳಗಾಗಿ ಬಳಲುತ್ತಿದ್ದ ವ್ಯಕ್ತಿಯನ್ನು ಬದುಕುಳಿಸುವ ಪ್ರಯತ್ನ ಮಾಡಿದ್ದಾರೆ. ತುರ್ತು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR/Cardiopulmonary Resuscitation) ವಿಧಾನ ಬಳಸಿದರು. ಎದೆ ಒತ್ತಿ ಜೀವ ಉಳಿಸಲು ಮುಂದಾದರು. ಖಾಮೋಶಿಯಾನ್ ಸಿನಿಮಾ ನಟನ ಈ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ಅನೇಕ ಹೃದಯಗಳನ್ನು ಗೆದ್ದಿದೆ. ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದ ಹಿನ್ನೆಲೆ ಅಭಿಮಾನಿಗಳು ನಟನನ್ನು ಶ್ಲಾಘಿಸುತ್ತಿದ್ದಾರೆ.
ಸಿಪಿಆರ್ ವಿಧಾನ ಬಳಕೆ: ನಟ ಗುರ್ಮೀತ್ ಚೌಧರಿ, ಅಪರಿಚಿತ ವ್ಯಕ್ತಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಕಾಳ್ಗಿಚ್ಚಿನಂತೆ ವೈರಲ್ ಆಗಿದೆ. ನಟ ತಮ್ಮ ಕೆಲಸಕ್ಕೆ ಹೋಗುತ್ತಿರುವ ವೇಳೆ ರಸ್ತೆಯಲ್ಲಿ ಜನಸಂದಣಿಯನ್ನು ಗಮನಿಸಿದ ನಟನಿಗೆ ವ್ಯಕ್ತಿಯೋರ್ವ ಹೃದಯಾಘಾತದಿಂದ ಬಳಲುತ್ತಿರುವುದು ಗೊತ್ತಾಗಿದೆ. ನಟ ಆ ಕೂಡಲೇ ಸಿಪಿಆರ್ ವಿಧಾನವನ್ನು ಬಳಸಿ ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದಾರೆ, ಜೊತೆಗೆ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಆಂಬ್ಯುಲೆನ್ಸ್ ಮೂಲಕ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು.