ಡೊಳ್ಳು ಸಿನಿಮಾ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ದೆಹಲಿವರೆಗೂ ಸದ್ದು ಮಾಡಿದ ಸಿನಿಮಾ. ನಮ್ಮ ನಾಡಿನ ಜನಪದ ಕಲೆಯಾಗಿರೋ ಡೊಳ್ಳಿನ ಸುತ್ತ ಸಾಗುವ ಈ ಚಿತ್ರ ಈಗಾಗಲೇ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈಗ ಈ ಚಿತ್ರದ ಟ್ರೈಲರ್ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಮೆಚ್ಚಿದ್ದು, ಬಿಡುಗಡೆ ಸಹ ಮಾಡಿದ್ದಾರೆ. ನಮ್ಮ ನಾಡಿನ ಕಲೆಯನ್ನು ಬಿಂಬಿಸುವ ಡೊಳ್ಳು ಚಿತ್ರವನ್ನು ಪ್ರತಿಯೊಬ್ಬರೂ ಬಂದು ನೋಡಿ ಅಂತಾ ಗಣೇಶ್ ಹೇಳುವ ಮೂಲಕ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡಿ ತಮ್ಮದೇ ಛಾಪು ಮೂಡಿಸಿರೋ ನಿರ್ದೇಶಕ ಪವನ್ ಒಡೆಯರ್ ಡೊಳ್ಳು ಸಿನಿಮಾ ನಿರ್ಮಾಣ ಮಾಡುವ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಆರಂಭದಿಂದಲೂ ತಮ್ಮ ಕಂಟೆಂಟ್ ಮೂಲಕ ಭಾರೀ ಸದ್ದು ಮಾಡುತ್ತಿರೋ ಡೊಳ್ಳು ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.