ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗು ನಟ ಸತೀಶ್ ಚಂದ್ರ ಕೌಶಿಕ್ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕೌಶಿಕ್ ಅವರು ದೆಹಲಿಯಲ್ಲಿನ ತಮ್ಮ ಸ್ನೇಹಿತನ ಮನೆಯಲ್ಲಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹೃದಯಾಘಾತದಿಂದ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹಿರಿಯ ನಟ ಅನುಪಮ್ ಖೇರ್ ತಮ್ಮ ಪ್ರೀತಿಯ ಸ್ನೇಹಿತ ಸತೀಶ್ ಜೊತೆಗಿನ ಕಪ್ಪು ಬಿಳುಪಿನ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. "ಸಾವು ಈ ಪ್ರಪಂಚದ ಅಂತಿಮ ಸತ್ಯ. ನಾನು ಬದುಕಿರುವಾಗಲೇ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಅವರ ಕುರಿತು ಹೀಗೆ ಬರೆಯುತ್ತೇನೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಹೀಗೊಂದು ದಿಢೀರ್ ಪೂರ್ಣವಿರಾಮ" ಎಂದು ಹಿಂದಿಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸತೀಶ್ ಸಿನಿ ಪಯಣ: ಸತೀಶ್ ಚಂದ್ರ ಕೌಶಿಕ್ ಅವರು 1956 ಏಪ್ರಿಲ್ 13 ರಂದು ಹರಿಯಾಣದಲ್ಲಿ ಜನಿಸಿದರು. 1980ರ ದಶಕದಲ್ಲಿ ತಮ್ಮ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದರು. ನಟನಾಗಿ 1987 ರ ಹಿಂದಿ ಸಿನಿಮಾ 'ಮಿಸ್ಟರ್ ಇಂಡಿಯಾ' ದಲ್ಲಿ 'ಕ್ಯಾಲೆಂಡರ್' ಮತ್ತು 1997 ರ 'ದಿವಾನ ಮಸ್ತಾನ' ಚಿತ್ರದ 'ಪಪ್ಪು ಪೇಜರ್' ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ:ವಿಶ್ರಾಂತಿ ಪಡೆಯುತ್ತಿರುವ ಬಿಗ್ ಬಿ; ಹೋಳಿ ಸಂಭ್ರಮ ಮಿಸ್ ಮಾಡಿಕೊಂಡ ಅಮಿತಾಭ್ ಬಚ್ಚನ್
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ನವದೆಹಲಿ ಮತ್ತು ಪುಣೆಯಲ್ಲಿನ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೆ ವಿದ್ಯಾರ್ಥಿಯಾಗಿರುವ ಸತೀಶ್, ಕುಂದನ್ ಶಾ ಅವರ 1983 ರ ಹಾಸ್ಯ ಚಿತ್ರ 'ಜಾನಿ ಭಿ ದೋ ಯಾರೋನ್'ಗೆ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾಗೆ ಬರೆದ ಸಂಭಾಷಣೆಯು ಅವರ ಕೈ ಹಿಡಿಯಿತು. ಮತ್ತಷ್ಟು ಉತ್ತಮ ಬರಹಗಳಿಗೂ ಅದು ನೆರವಾಗಿದೆ.
ಸತೀಶ್ ಎರಡು ಬಾರಿ ಫಿಲ್ಮ್ಫೇರ್ ಅತ್ಯುತ್ತಮ ಹಾಸ್ಯ ಪ್ರಶಸ್ತಿ ಪಡೆದಿದ್ದಾರೆ. 1990 ರ 'ರಾಮ್ ಲಕಾನ್' ಮತ್ತು ಏಳು ವರ್ಷಗಳ ನಂತರ 'ಸಾಜನ್ ಚಲೇ ಸಸುರಾಲ್' ಚಿತ್ರಕ್ಕಾಗಿ ಈ ಪ್ರಶಸ್ತಿ ಗೆದ್ದರು. ಆ ಬಳಿಕ 1993 ರಲ್ಲಿ ತಮ್ಮದೇ ನಿರ್ದೇಶನದ ಮೊದಲ ಸಿನಿಮಾ 'ರೂಪ್ ಕಿ ರಾಣಿ ಚೋರೋನ್ ಕಾ ರಾಜಾ' ತೆರೆಕಂಡಿತು. ಬಾಲಿವುಡ್ ಲೇಡಿ ಸೂಪರ್ಸ್ಟಾರ್ ಶ್ರೀದೇವಿ ನಾಯಕಿಯಾಗಿ ಅಭಿನಯಿಸಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಅದಾಗಿ 1995 ರಲ್ಲಿ ಅವರ ಎರಡನೇ ಸಿನಿಮಾ 'ಪ್ರೇಮ್' ಕೂಡ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತು. ಬಳಿಕ ನಾಲ್ಕು ವರ್ಷಗಳ ನಂತರ ಅವರ 'ಹಮ್ ಆಪ್ಕೆ ದಿಲ್ ಮೇ ರೆಹ್ತೆ ಹೇ' ಚಿತ್ರ ಯಶಸ್ವಿಯಾಗಿತ್ತು.
ನಟನ ಹೋಳಿ ಆಟ ನೆನಪಿಸಿಕೊಂಡ ಫ್ಯಾನ್ಸ್: ಮಾರ್ಚ್ 7 ರಂದು ಮುಂಬೈನಲ್ಲಿ ಗೀತರಚನೆಕಾರ ಮತ್ತು ಲೇಖಕ ಜಾವೇದ್ ಅಖ್ತರ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಸತೀಶ್ ಭಾಗವಹಿಸಿದ್ದರು. ಈವೆಂಟ್ನ ನಾಲ್ಕು ಫೋಟೋಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದರು. ಇದೇ ವಿಡಿಯೋವನ್ನು ನಟನ ಅಭಿಮಾನಿಗಳು ಪೋಸ್ಟ್ ಹಾಕಿಕೊಂಡು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ