'ಬಜಾರ್' ಮತ್ತು 'ಬೈ ಟು ಲವ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಧನ್ವೀರ್ ಗೌಡ. ಇವರ ನಟನೆಯ ಮುಂಬರುವ ಚಿತ್ರವೇ 'ವಾಮನ'. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಸದ್ಯ ಪೋಸ್ಟರ್ ಹಾಗೂ ಹಾಡುಗಳಿಂದಲೇ ಚಿತ್ರವು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದೀಗ ಸಿನಿಮಾದ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಹುಣಸೂರು ಶಾಸಕ ಹರೀಶ್ ಗೌಡ ಸೇರಿದಂತೆ ಹಲವಾರು ರಾಜಕೀಯ ಮುಖಂಡರ ಸಮ್ಮುಖದಲ್ಲಿ 'ವಾಮನ' ಟೀಸರ್ ಲಾಂಚ್ ಮಾಡಲಾಗಿದೆ.
ಈ ವೇಳೆ ಮೊದಲು ಮಾತು ಶುರು ಮಾಡಿದ ನಿರ್ದೇಶಕ ಶಂಕರ್ ರಾಮನ್, "ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆ ಪಡೆದಿದೆ. ಇದೊಂದು ಆಕ್ಷನ್ ಚಿತ್ರ. ಹೀಗಾಗಿ ಚಿತ್ರದಲ್ಲಿ ಆಕ್ಷನ್ ಸೀನ್ಗಳು ಹೇಗಿರುತ್ತವೆ ಎಂಬುದನ್ನು ತೋರಿಸುವುದಕ್ಕೆ ಈ ಟೀಸರ್ ಬಿಡುಗಡೆ ಮಾಡಿದ್ದೇವೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಫೈಟ್ ಸೀನ್ಗಳಿವೆ. ಮೂರು ಫೈಟ್ಗಳಿಗೆ ಅರ್ಜುನ್ ರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ. ಇನ್ನೊಂದು ಫೈಟ್ನಲ್ಲಿ ಕಥೆ ಜೊತೆ ಜೊತೆಯಾಗಿ ಸಾಗುತ್ತದೆ. ಇದರಲ್ಲಿ ಬರುವ ಫೈಟ್ಗಳು ಪ್ರೇಕ್ಷಕರಿಗೆ ಬೇರೆಯೇ ತರಹದ ಅನುಭವ ಕೊಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಸಾಹಸ ದೃಶ್ಯವನ್ನು ವಿಕ್ರಮ್ ಮೋರ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಜ್ ಮತ್ತು ವಿಕ್ರಮ್ ಮೋರ್ ಜೊತೆಗೆ ಜಾಲಿ ಬಾಸ್ಟಿನ್ ಅವರ ನೆರವು ಮತ್ತು ಮಾರ್ಗದರ್ಶನವಿದೆ. ಈ ಮೂವರೂ ಸಾಹಸ ನಿರ್ದೇಶಕರಿಗೆ ಚಿತ್ರತಂಡದಿಂದ ಧನ್ಯವಾದ ತಿಳಿಸಿದರು.
ಅಲ್ಲದೇ, "ಧನ್ವೀರ್ ಅವರ ಚಿತ್ರ ಬಿಡುಗಡೆಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಹಬ್ಬ ಆಗುವುದರಲ್ಲಿ, ಯಾವುದೇ ಅನುಮಾನವಿಲ್ಲ. ವಾಮನ ಅಂದರೆ ದಶಾವತಾರದಲ್ಲಿ ಬರುವ ಐದನೇ ಅವತಾರ. ದುಷ್ಟತ್ವವೇ ಸರ್ವಸ್ವ ಎಂದು ಹೇಳುವ ಜನರ ವಿರುದ್ಧ ವಾಮನ ಹೇಗೆ ಹೋರಾಡುತ್ತಾನೆ ಅನ್ನೋದೇ ಕಥೆ. ಜೊತೆಗೆ ರೌಡಿಸಂ, ಭೂಗತಲೋಕ ಮತ್ತು ಡ್ರಗ್ಸ್ ಮಾಫಿಯಾ ಹಿನ್ನಲೆಯಲ್ಲಿ ಕಥೆಯು ಸಾಗುತ್ತದೆ. ಈ ಚಿತ್ರದ ಹೈಲೈಟ್ ಅಂದರೆ ಸೆಂಟಿಮೆಂಟ್ ದೃಶ್ಯಗಳು. ಈ ಚಿತ್ರದಲ್ಲಿ ಒಂದು ಅದ್ಭುತವಾದ ಸಂದೇಶವಿದೆ" ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.