2019ರಲ್ಲಿ ತೆರೆಕಂಡ ಬಜಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟ ಧನ್ವೀರ್ ಗೌಡ. ಸ್ಯಾಂಡಲ್ವುಡ್ನಲ್ಲಿ ಸಾಧಿಸಬೇಕೆಂಬ ಛಲ, ಅದಕ್ಕೆ ತಕ್ಕ ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಗಳತ್ತ 'ಧನ್ವೀರ್ ಗೌಡ' ಚಿತ್ತ ಹರಿಸಿದ್ದಾರೆ. ಇದೀಗ ಕೈವ ಹಾಗೂ ವಾಮನ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ಶಂಕರ್ ರಾಮನ್ ಆ್ಯಕ್ಷನ್ ಕಟ್ ಹೇಳಿರುವ 'ವಾಮನ' ಸಿನಿಮಾ ಮತ್ತು ಜಯತೀರ್ಥ ನಿರ್ದೇಶನದ 'ಕೈವ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಚಿತ್ರಗಳನ್ನು ಶೀಘ್ರವೇ ರಿಲೀಸ್ ಮಾಡಬೇಕೆಂದು ಚಿತ್ರತಂಡದಿಂದ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಧನ್ವೀರ್ ಗೌಡ ಬೇರ್ ಬಾಡಿಯಲ್ಲಿ ದರ್ಶನ ಕೊಟ್ಟಿದ್ದಾರೆ.
ಹೇಳಿ ಕೇಳಿ ನಟ ಧನ್ವೀರ್ ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡುವ ಯುವ ನಟ. ಪ್ರತಿ ಸಿನಿಮಾಕ್ಕಾಗಿ ಸಾಕಷ್ಟು ಕಸರತ್ತು ನಡೆಸುವ ಧನ್ವೀರ್ ಸದ್ಯ ಸಿಕ್ಸ್ ಪ್ಯಾಕ್ ಕ್ಲಬ್ ಸೇರಿದ್ದಾರೆ. ಕಟ್ಟುಮಸ್ತಾದ ದೇಹ ಹೊಂದಿರುವ ಧನ್ವೀರ್ ದರ್ಶನ ಕೊಟ್ಟಿರುವ ಝಲಕ್ ನೋಡಿದ್ರೆ ಅಬ್ಬಬ್ಬಾ! ಅನ್ನೋದು ಖಂಡಿತ.
ಇಷ್ಟೆಲ್ಲ ಕಷ್ಟಪಟ್ಟು ದೇಹವನ್ನು ಹುರಿಗೊಳಿಸಿರುವ ಧನ್ವೀರ್ ಗೌಡ ಮುಂದಿನ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ. ಮಾಸ್, ಲವರ್ ಬಾಯ್ ಹೀಗೆ ಯಾವುದೇ ಪಾತ್ರ ಕೊಟ್ಟರೂ ಅದ್ಭುತವಾಗಿ ನಟಿಸುವ ಧನ್ವೀರ್ ಬಜಾರ್ ಚಿತ್ರದಲ್ಲಿ ಮಾಸ್ ಅವತಾರದಲ್ಲಿ, ಬೈ ಟು ಲವ್ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ವಾಮನ ಹಾಗೂ ಕೈವ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಲು ಅಣಿಯಾಗುತ್ತಿದ್ದಾರೆ. ಒಂದಷ್ಟು ಹೊಸ ಕಥೆ ಕೇಳಿರುವ ಅವರು ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಿದ್ದಾರೆ. ಹೊಸ ಸಿನಿಮಾಗಾಗಿ ಬಜಾರ್ ಹುಡ್ಗ ಇಷ್ಟೊಂದು ಕಸರತ್ತು ಮಾಡಿರೋದಾ ಅನ್ನೋದು ಸದ್ಯದಲ್ಲೇ ರಿವೀಲ್ ಆಗಲಿದೆ.