ಗಂಗಾವತಿ (ಕೊಪ್ಪಳ): ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ. 46ನೇ ಜನ್ಮದಿನದ ಸಂಭ್ರಮದಲ್ಲಿರುವ ದರ್ಶನ್ ಅವರಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗವರು ಸೇರಿದಂತೆ ಅಭಿಮಾನಿಗಳು ವಿಶೇಷವಾಗಿ ಶುಭ ಕೋರಿದ್ದಾರೆ. ದಚ್ಚು ಹುಟ್ಟು ಹಬ್ಬವನ್ನು ವಿವಿಧೆಡೆ ಅವರ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಟ್ವೀಟ್:ಟ್ವಿಟರ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ನಟಿ ರಕ್ಷಿತಾ ಅವರು, ಇದು ಆ ಸಂಜೆಯ ನನ್ನ ಮೆಚ್ಚಿನ ಚಿತ್ರ. ಪ್ರೀತಿ ಮತ್ತು ಬೆಂಬಲಕ್ಕಾಗಿ, ಕೆಲ ಸುಂದರ ನೆನಪುಗಳಿಗಾಗಿ ಧನ್ಯವಾದಗಳು. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ದಾಸ ದರ್ಶನ್, ನೀವು ನಿಜವಾಗಿಯೂ ಉತ್ತಮವಾದದ್ದಕ್ಕೆ ಅರ್ಹರು ಎಂದು ಬರೆದುಕೊಂಡಿದ್ದಾರೆ.
ಸುಮಲತಾ ಅಂಬರೀಶ್ ಟ್ವೀಟ್: ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು. ಆ ಭಗವಂತ ದೀರ್ಘ ಆಯಸ್ಸು , ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ. ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ. ಪುತ್ರ ಅಭಿಷೇಕ್ ಮತ್ತು ದರ್ಶನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಡಾಲಿ ಧನಂಜಯ್ ಹೀಗಂದ್ರು: ನಮ್ಮ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್, ಪ್ರೀತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಡಾಲಿ ಧನಂಜಯ್ ಬರೆದುಕೊಂಡಿದ್ದಾರೆ. ಜೊತೆಗೆ ದರ್ಶನ್ ಅವರ ಕಾಟೆರ (kaatera) ಸಿನಿಮಾಗೆ ಶುಭ ಹಾರೈಸಿದ್ದಾರೆ.