'ಪೊನ್ನಿಯಿನ್ ಸೆಲ್ವನ್ 2' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ನಟ ಚಿಯಾನ್ ವಿಕ್ರಮ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟ ವಿಕ್ರಮ್ 'ಪೊನ್ನಿಯಿನ್ ಸೆಲ್ವನ್ 2'ನಲ್ಲಿನ ನಟನೆಗಾಗಿ ವಿಮರ್ಶಕರು, ಅಭಿಮಾನಿಗಳಿಂದ ಪ್ರಶಂಸೆಗಳನ್ನು ಸ್ವೀಕರಿಸುತ್ತಿದ್ದಾರೆ. ತಮ್ಮ ಮುಂಬರುವ ಚಿತ್ರ ತಂಗಲಾನ್‌ಗಾಗಿ (Thangalaan) ಅಭ್ಯಾಸ ಮಾಡುವ ವೇಳೆ ಅವರು ಗಾಯ ಮಾಡಿಕೊಂಡಿದ್ದಾರೆ. ಪಕ್ಕೆಲುಬಿನ ಗಾಯದ ಹಿನ್ನೆಲೆ ಪಾ ರಂಜಿತ್ ಅವರ ತಂಗಲಾನ್ ಚಿತ್ರೀಕರಣದಿಂದ ನಟ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂದು ವಿಕ್ರಮ್ ಅವರ ಮ್ಯಾನೇಜರ್ ಟ್ವೀಟ್ ಮಾಡಿದ್ದಾರೆ.
ನಟ ವಿಕ್ರಮ್ ಗಾಯಗೊಂಡ ಸುದ್ದಿಯನ್ನು ಅವರ ಮ್ಯಾನೇಜರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ವಿಕ್ರಮ್ ಮತ್ತು ಅವರ ಮಗ ಧ್ರುವ್ ಅವರ ಮ್ಯಾನೇಜರ್ ಸೂರ್ಯನಾರಾಯಣನ್ ಟ್ವೀಟ್ ಮಾಡಿದ್ದು, 'ಆದಿತಾ ಕರಿಕಾಳನ್ ಅಲಿಯಾಸ್ ಚಿಯಾನ್ ವಿಕ್ರಮ್ ಅವರಿಗೆ ಬಂದಿರುವ ಎಲ್ಲಾ ಪ್ರೀತಿ ಮತ್ತು ಕೃತಜ್ಞತೆಗಳಿಗೆ ಧನ್ಯವಾದಗಳು. ಅಭ್ಯಾಸದ ಸಮಯದಲ್ಲಿ ಪಕ್ಕೆಲುಬು ಮುರಿದುಕೊಂಡಿದ್ದಾರೆ. ಚಿಯಾನ್ ತಮ್ಮ ತಂಗಲಾನ್ ತಂಡವನ್ನು ಮತ್ತೆ ಸೇರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಅವರು ಬೆಂಬಲಕ್ಕಾಗಿ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಸಾಧ್ಯವಾದಷ್ಟು ಬೇಗ ತಮ್ಮ ಸಾಮಾನ್ಯ ರಾಕಿಂಗ್ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ.
ಸೂರ್ಯನಾರಾಯಣನ್ ಟ್ವೀಟ್ ಮಾಡಿದ ತಕ್ಷಣ ನಟ ಚಿಕ್ರಮ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಲು ಆರಂಭಿಸಿದ್ದಾರೆ. ಈ ಟ್ವೀಟ್ಗೆ ಅಭಿಮಾನಿಗಳು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. 'ಟೇಕ್ ಕೇರ್ ಸರ್, ದೇವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾನೆ' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು "ಆತ್ಮೀಯ ತಲೈವಾ ಶೀಘ್ರದಲ್ಲೇ ಗುಣಮುಖರಾಗಿ" ಎಂಬ ಹಾರೈಸಿದ್ದಾರೆ.