ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಾಗೆಯೇ ಹಿಂದುತ್ವ ಹೇರಿಕೆ ಒಪ್ಪಲಾಗಲ್ಲ. ಧರ್ಮ, ಜಾತಿಗಳಲ್ಲಿ ವಿವಿಧತೆ ಇದೆ. ಹಿಂದೂ ಬೇರೆ ಹಿಂದುತ್ವ ಬೇರೆ. ಭೂತಕೋಲ ಮೂಲ ನಿವಾಸಿಗಳ ಆಚರಣೆ. ಕೇವಲ ಹಿಂದು ಧರ್ಮದ್ದಲ್ಲ. ಎಲ್ಲ ಆಚರಣೆಗಳನ್ನು ಗೌರವಿಸಿ, ಪಾಲಿಸಿ. ಆದರೆ, ಎಲ್ಲವನ್ನೂ ಹಿಂದೂಗಳ ಸ್ವಂತ ಎನ್ನೋಕ್ಕಾಗಲ್ಲ ಎಂದು ನಟ ಚೇತನ್ ಸ್ಪಷ್ಟಪಡಿಸಿದ್ದಾರೆ.
ಕಾಂತಾರ ಸಿನಿಮಾ ಭಾರತದಾದ್ಯಂತ ಕನ್ನಡದ ಕಂಪನ್ನು ಹರಿಸಿದೆ. ತುಳುನಾಡ ದೈವಾರಾಧನೆ ಮತ್ತು ಪ್ರಾದೇಶಿಕ ಕ್ರೀಡೆ ಕಂಬಳವನ್ನು ಎಲ್ಲೆಡೆ ಪರಿಚಯಿಸಿದೆ. ಸಿನಿಪ್ರಿಯರು ಮಾತ್ರವಲ್ಲದೇ, ಸಿನಿಮಾ ರಂಗದ ಸ್ಟಾರ್ಗಳು ಸಹ ಕಾಂತಾರವನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಚಿತ್ರ ಗಳಿಸಿದ್ದು ಕೇವಲ ಮೆಚ್ಚುಗೆ. ಆದರೆ ಹೋರಾಟಗಾರ, ಆ ದಿನಗಳು ನಟ ಚೇತನ್ ಈಗ ಭೂತಕೋಲದ ಬಗ್ಗೆ ಪ್ರಶ್ನೆ ಎತ್ತಿ ವಾದ ವಿವಾದಕ್ಕೆ ವೇದಿಕೆ ಸೃಷ್ಟಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
"ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ'ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಆದರೆ, ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ - ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ" ಎಂದು ನಟ ಚೇತನ್ ಪೋಸ್ಟ್ ಮಾಡಿದ್ದರು.
ಕಾಂತಾರ ಸಿನಿಮಾದಲ್ಲಿ ಭೂತಕೋಲ ಆಚರಣೆ ಇದೆ. ಇದು ನಮ್ಮ ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದರು. ಈ ಹೇಳಿಕೆಯನ್ನು ನಟ ಚೇತನ್ ಅಲ್ಲಗಳೆದು ತಮ್ಮ ಅಭಿಪ್ರಾಯವನ್ನು ಈ ಮೇಲಿನಂತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಾರತದ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದ ಕಾಂತಾರ!
ಆ ದಿನಗಳು ಚೇತನ್ ಕೇಳಿದ ಪ್ರಶ್ನೆ ಈಗ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಸರಿಯೋ ತಪ್ಪೋ ಎಂಬ ಚರ್ಚೆ ಶುರುವಾಗಿದೆ. ಸಿನಿಮಾ ಹಿಟ್ ಆಗಲು ಭೂತಾರಾಧನೆಯೂ ಒಂದು ಕಾರಣ. ಈ ಬಗ್ಗೆ ನಟ ರಿಷಬ್ ಶೆಟ್ಟಿ ಹೇಳಿಕೆ ನೀಡಿದ್ದರು. ಅದನ್ನು ಪ್ರಶ್ನಿಸಿರುವುದು ಈಗ ರಿಷಬ್ ಮತ್ತು ಕಾಂತಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತು ಮುಂದುವರಿಸಿ, ಮೂಲವಾಸಿಗಳು, ಬಹು ಜನರು, ದ್ರಾವಿಡರು ಎಲ್ಲವೂ ಮಿಶ್ರಣ ಆಗಿ 3,500 ವರ್ಷಗಳಿಂದ ವೈದಿಕ ಪರಂಪರೆ ಅನ್ನೋದು ಬಂದಿದೆ. ವೈದಿಕ ಪರಂಪರೆಯಲ್ಲಿ ಅದರದ್ದೇ ಆದ ವಿಶೇಷತೆ ಇದೆ. ವೈದಿಕ, ಹಿಂದೂ ಧರ್ಮ ಎಲ್ಲವನ್ನೂ ಆಚರಿಸಲು ಸಾಂವಿಧಾನಿಕ ಹಕ್ಕು ಇದೆ. ಆದರೆ ಪ್ರತಿಯೊಂದನ್ನು ಹಿಂದು ಧರ್ಮದ್ದು ಎನ್ನಲು ಸಾಧ್ಯವಿಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು ಎಂದು ತಿಳಿಸಿದರು.
ಎಲ್ಲಾ ಮೂಲ ನಿವಾಸಿಗಳು, ಬುಡಕಟ್ಟು ಜನರನ್ನು ಒಳಗೆ ಕರೆದುಕೊಂಡು ಎಲ್ಲವನ್ನೂ ನಮ್ಮದು ಎಂದುಕೊಂಡು ಬಂದಿದ್ದಾರೆ. ಎಲ್ಲವನ್ನೂ ಹಿಂದೂ ಧರ್ಮದ್ದು ಎನ್ನುತ್ತಾರೆ. ಆದರೆ ಇದು ನಿಜ ಅಲ್ಲ. ಭೂತಕೋಲ, ಕೊರಗಜ್ಜ ಕೊರಗ ಸಮುದಾಯದವರದ್ದು. ಇದನ್ನು ವಿಂಗಡನೆ ಮಾಡುವ ಅಗತ್ಯತೆ ಇದೆ. ಆದಿವಾಸಿ, ಬುಡಕಟ್ಟು, ಮೂಲ ವಾಸಿ ಜನರು ಇಂದಿಗೂ ನಮಗೆ ಪತ್ಯೇಕ ಸ್ಥಾನ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಅವರು ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಹಿಂದೂ ಧರ್ಮದಲ್ಲಿ ಸೇರುವ ಇಚ್ಛೆ ಇಲ್ಲ, ನಮಗೆ ಪ್ರತ್ಯೇಕ ಕಾಲಂ ಕೊಡಿ ಎಂದು ಬೇಡಿಕೆಯಿಡುತ್ತಾ ಬಂದಿದ್ದಾರೆ. ಆದಿವಾಸಿ ಧರ್ಮವನ್ನು ನಾವು ಗುರುತಿಸಿಕೊಳ್ಳುತ್ತೇವೆ ಎಂದಿದ್ದಾರೆ ಎಂದು ನಟ ಚೇತನ್ ತಿಳಿಸಿದರು.
ಇದನ್ನೂ ಓದಿ:'ಕಾಂತಾರ ನೋಡುವ ಕುತೂಹಲ ಹೆಚ್ಚಾಗಿದೆ': ಬಾಲಿವುಡ್ ನಟಿ ಕಂಗನಾ ರಣಾವತ್
ನಾವು ಅವೈದಿಕ ಪರಂಪರೆಯನ್ನು ಅರ್ಥ ಮಾಡಿಕೊಳ್ಳಬೇಕು. ವೈದಿಕತೆ ಬರೋ ಮುಂಚಿನ ಮೂಲ ನಿವಾಸಿ ಪರಂಪರೆಯನ್ನು ಅರ್ಥ ಮಾಡಿಕೊಳ್ಳಬೇಕು, ಅದಕ್ಕೂ ಹಿಂದೂ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳೋದು ಬಹಳ ಮುಖ್ಯ, ಎಲ್ಲ ಆಚರಣೆಗಳನ್ನು ಹಿಂದೂ ಧರ್ಮದ್ದು ಎನ್ನಲು ಸಾಧ್ಯವಿಲ್ಲ ಎಂದರು.