ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ ಕ್ಷೇತ್ರಗಳಲ್ಲಿ ಮತ ಪ್ರಚಾರ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ವಿಚಾರವಾಗಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿ, ಕಿಚ್ಚ ಸುದೀಪ್ ತಮ್ಮನ್ನು ಮಾರಿಕೊಳ್ಳುವವರಲ್ಲ ಎಂದು ಹೇಳಿದ್ದರು. ಆಮೇಲೆ ಸುದೀಪ್ ಹೇಳಿಕೆ ಕೇಳಿ ನನಗೆ ಆಘಾತವಾಗಿದೆ ಎಂದಿದ್ದರು. ಬಳಿಕ ಸರಣಿ ಟ್ವೀಟ್ಗಳನ್ನು ಮಾಡಿ ಸುದೀಪ್ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಇಬ್ಬರು ನಟರಿಗೂ ನಟ ಚೇತನ್ ಅಹಿಂಸಾ ಟಾಂಗ್ ಕೊಟ್ಟಿದ್ದಾರೆ.
ಚೇತನ್ ಅಹಿಂಸಾ ಹೇಳಿದ್ದೇನು?: "ಬಿಜೆಪಿಗೆ ಸುದೀಪ್ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ರವರು ಆಶ್ಚರ್ಯ ಮತ್ತು ಆಘಾತಕ್ಕೊಳಗಾಗಿದ್ದಾರೆ. ಇದು ಕುತೂಹಲಕಾರಿ ವಿಷಯವಾಗಿದೆ. ಇಬ್ಬರು ಪ್ರತಿಭಾವಂತ ನಟರು, ಒಬ್ಬರು ಬಿಜೆಪಿ ಪರ ಮತ್ತು ಮತ್ತೊಬ್ಬರು ಬಿಜೆಪಿ ವಿರೋಧಿ. ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ. ನಾನು ಇಬ್ಬರ ನಿಲುವುಗಳು ಅಥವಾ ಸಿದ್ಧಾಂತಗಳನ್ನು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಭಳಕೆಗೆ ಹಿಂದಿರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ" ಎಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಕಾಶ್ ರಾಜ್ ಸರಣಿ ಟ್ವೀಟ್: ಕಿಚ್ಚ ಸುದೀಪ್ ಅವರು ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಘೋಷಿಸುವ ಮೊದಲು ಪ್ರಕಾಶ್ ರಾಜ್ ಪ್ರತಿಕ್ರಿಯಿಸಿ, ಸುದೀಪ್ ತಮ್ಮನ್ನು ತಾವು ಮಾರಿಕೊಳ್ಳುವವರಲ್ಲ ಎಂದು ಹೇಳಿದ್ದರು. ಆಮೇಲೆ ಸುದೀಪ್ ಹೇಳಿಕೆ ಕೇಳಿ, ನನಗೆ ಆಶ್ಚರ್ಯ ಮತ್ತು ಆಘಾತವಾಗಿದೆ ಎಂದು ಹೇಳಿದ್ದರು. ಬಳಿಕ ಇಂದು ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, "ನೋಡ್ರಪ್ಪ, ನಿಮ್ ಮಾಮನೊ, ನಿಮ್ ಅತ್ತೇನೊ, ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%, .20% ಇಲ್ಲ 30 % ಕೊಡಿ. ಅದು ನಿಮ್ಮಿಷ್ಟ. ಆದ್ರೆ, ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ, ಅಷ್ಟೆ ಅಷ್ಟೇ" ಎಂದು ಅಸಮಾಧಾನ ಹೊರಹಾಕಿದ್ದಾರೆ.