ಆ ದಿನಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಚೇತನ್ ಕೆಲ ಉತ್ತಮ ಸಿನಿಮಾಗಳನ್ನು ಮನೋರಂಜನಾ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅದಾದ ಬಳಿಕ ಸಾಮಾಜಿಕ ಸೇವೆ, ಹೋರಾಟಗಳಲ್ಲಿ ತೊಡಗಿಕೊಂಡರು. ಹಲವು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಚೇತನ್ ಹೇಳಿಕೆಗಳು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತವೆ.
ನಟ ಚೇತನ್ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ. ವೀಸಾ ರದ್ಧತಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ ಚಿತ್ರರಂಗದವರು ಈ ಬಗ್ಗೆ ಧ್ವನಿ ಎತ್ತಿರಲಿಲ್ಲ. ಮೊದಲ ಬಾರಿಗೆ ನಟ ಕಿಶೋರ್ ಪರೋಕ್ಷವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ನಟ ಚೇತನ್ ಅವರ ಹೆಸರು ಉಲ್ಲೇಖಿಸರಿರಲಿಲ್ಲ. ಆದರೆ ಆ ಬರಹ ಚೇತನ್ ಪರ ಎಂಬುದು ಮಾತ್ರ ಸ್ಪಷ್ಟ. ಕಿಶೋರ್ ಬರಹಕ್ಕೆ ಚೇತನ್ ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ನಡೆಗೆ ಬೆಂಬಲ ಸೂಚಿಸಿದ ಚಿತ್ರನಟನನ್ನು ಸ್ಮರಿಸಿ, ಧನ್ಯವಾದ ಅರ್ಪಿಸಿದ್ದಾರೆ.
ನಟ ಚೇತನ್ ಟ್ವೀಟ್: ''ನನ್ನ ವೀಸಾ ರದ್ಧತಿ ಬಗ್ಗೆ ಮಾತನಾಡಿದ್ದಕ್ಕೆ, ಮತ್ತು ನಿಮ್ಮದೇ ಆದ ರೀತಿಯಲ್ಲಿ ಹಿಂದುತ್ವ ರಾಜಕೀಯಕ್ಕೆ ಸವಾಲು ಹಾಕಿದ್ದಕ್ಕಾಗಿ ಧನ್ಯವಾದಗಳು ಕಿಶೋರ್'' ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ.
ನಟ ಕಿಶೋರ್ ಪೋಸ್ಟ್ ಹೀಗಿತ್ತು: ''ಹಿಂದುತ್ವ ಎನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನಸ್ಥಿತಿ ಇರುವಂತಹದ್ದು. ಆದರೆ 'ಹಿಂದುತ್ವ' ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೇ ಎನ್ನುವುದು ಎಷ್ಟು ಉಚಿತ?? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ?.