ರಾಜ್ಯ ವಿಧಾನಸಭೆ ಚುನಾವಣಾ ಅಖಾಡ ರಂಗೇರುತ್ತಿದೆ. ಎಲ್ಲೆಡೆ ಪಕ್ಷಗಳ ಭರ್ಜರಿ ಪ್ರಚಾರ ನಡೆಯುತ್ತಿದೆ. ಸ್ಟಾರ್ ಸೆಲೆಬ್ರಿಟಿಗಳು ಸಹ ಪ್ರಚಾರಕ್ಕಿಳಿದಿದ್ದಾರೆ. ಪಕ್ಷಗಳು ತಮ್ಮ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿವೆ. ಈ ಬಗ್ಗೆ ನಟ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಮೇ 2ರಂದು (ಮಂಗಳವಾರ) ರಾಜ್ಯ ಕಾಂಗ್ರೆಸ್ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಈ ಪ್ರಣಾಳಿಕೆ ಬಿಡುಗಡೆ ಆಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ರಿಲೀಸ್ ಮಾಡಿದ್ದರು. ಪ್ರಣಾಳಿಕೆಯಲ್ಲಿ ಮತದಾರರಿಗೆ ಹಲವು ಭರವಸೆಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಬಜರಂಗದಳ ಮತ್ತು ಪಿಎಫ್‌ಐಗಳಂತಹ ಸಂಘಟನೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಇಲ್ಲವೇ ನಿಷೇಧ ಮಾಡಲಾಗುವುದು ಎಂದು ಸಹ ಭರವಸೆ ಕೊಟ್ಟಿದ್ದು, ಇದು ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಹೋರಾಟಗಾರರೂ ಆಗಿರುವ ನಟ ಚೇತನ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ಚೇತನ್ ಪೋಸ್ಟ್:ಸದಾ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದಾರೆ. ''ಕಾಂಗ್ರೆಸ್ ತನ್ನ ಕರ್ನಾಟಕ ಪ್ರಣಾಳಿಕೆಯಲ್ಲಿ ಪಿಎಫ್ಐ ಮತ್ತು ಬಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದೆ. ನಾನು ಪುಸ್ತಕಗಳು, ಚಲನ ಚಿತ್ರಗಳು, ಸಂಸ್ಥೆಗಳು ಸೇರಿದಂತೆ ಇತ್ಯಾದಿಗಳ 'ನಿಷೇಧ ಸಂಸ್ಕೃತಿ'ಯ ವಿರೋಧಿಯಾಗಿದ್ದೇನೆ. ಅವುಗಳನ್ನು ನಿಷೇಧಿಸುವ ಬದಲು ವಿಚಾರಗಳ ಯುದ್ಧಭೂಮಿಯಲ್ಲಿ ನಾವು ನಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಸೋಲಿಸಬೇಕು ಎಂದು ನಾನು ನಂಬುತ್ತೇನೆ. ಹಿಂದೆ ಪಿಎಫ್ಐ ನಿಷೇಧವನ್ನು ಬಿಜೆಪಿ ಮಾಡಿದಾಗ ನಾನು ವಿರೋಧಿಸಿದ್ದೆ. ಅದೇ ರೀತಿ ಈಗ ಪಿಎಫ್ಐ, ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಯತ್ನವನ್ನು ನಾನು ವಿರೋಧಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಡಿಕೆಶಿ ಪ್ರತಿಕ್ರಿಯೆ: ಕಾಂಗ್ರೆಸ್ ಪ್ರಣಾಳಿಕೆ ವಿಚಾರವಾಗಿ ಪರ ವಿರೋಧ ಚರ್ಚೆ ಆಗುತ್ತಿದೆ. ಭಜರಂಗದಳ ನಿಷೇಧ ಬಗ್ಗೆ ಹಲವೆಡೆ ಸಾಕಷ್ಟು ಅಸಮಧಾನ ವ್ಯಕ್ತವಾಗಿದೆ. ಈ ವಿಚಾರವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರು ಏನು ಬೇಕಾದ್ರೂ ಮಾಡಿಕೊಳ್ಳಲಿ, ಹೇಗೆ ಬೇಕಾದರು ಅರ್ಥೈಸಿಕೊಳ್ಳಲಿ ನಾವು ಮಾತ್ರ ಈ ಬಜರಂಗದಳ ನಿಷೇಧ ಘೋಷಣೆಯನ್ನು ವಾಪಸ್ ಪಡೆಯಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧ?. ಆಂಜನೇಯ ಬೇರೆ ಬಜರಂಗದಳ ಬೇರೆ ಎಂದು ಕೂಡ ತಿಳಿಸಿದ್ದಾರೆ. ನಾವು ಕೂಡ ಭಕ್ತರೇ ಎಂದು ಸ್ಪಷ್ಟಪಡಿಸಿದ್ದಾರೆ.