ಇತ್ತೀಚೆಗಷ್ಟೇ ತೆರೆಕಂಡ ಅನೂಪ್ ಭಂಡಾರಿ ನಿರ್ದೇಶನದ, ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ವಿಕ್ರಾಂತ್ ರೋಣ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ತರಹೇವಾರಿ ವಾದ ಮತ್ತು ವದಂತಿಗಳು ಹರಿದಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಬೆನ್ನಲ್ಲೇ ಆ ದಿನಗಳು ಚಿತ್ರದ ನಟ ಕಂ ಹೋರಾಟಗಾರ ಚೇತನ್ ಅವರು ಚಿತ್ರದ ಬಗ್ಗೆ ತಮ್ಮ ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇವರ ಅಭಿಪ್ರಾಯಗಳು ಸದ್ಯ ಸ್ಯಾಂಡಲ್ವುಡ್ನಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ.
ಚಿತ್ರವನ್ನು ವೀಕ್ಷಿಸಿದ ಹಲವರು ಸುದೀಪ್ ನಟನೆಯನ್ನು ಮೆಚ್ಚುಕೊಂಡು ಇದೊಂದು ಅದ್ಭುತ ಕಥೆ ಎಂದು ಬಣ್ಣಿಸುತ್ತಿದ್ದರೆ, ಇನ್ನೂ ಕೆಲವರು ರಂಗಿತರಂಗಿ ಚಿತ್ರದ ಮುಂದುವರೆದ ಭಾಗ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಚಿತ್ರ ನಟ ಚೇತನ್ ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಗೆ ಕೆಲವರು ಅಪಸ್ವರ ಸಹ ಎತ್ತಿದ್ದಾರೆ.
ಟ್ವೀಟ್ನಲ್ಲಿ ಏನಿದೆ?:'ವಿಕ್ರಾಂತ್ ರೋಣ'- ತಾಂತ್ರಿಕವಾಗಿ ಮತ್ತು ಅಭಿನಯ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ, ದಲಿತರನ್ನು-ಬಹುಜನರನ್ನು ದುಷ್ಟ, ಪೈಶಾಚಿಕನಂತೆ ಬಿಂಬಿಸಿ ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ. ಈ ಸೂಕ್ಷ್ಮವಿಲ್ಲದ ಚಿತ್ರದಿಂದ ನಾನು ನಿರಾಶೆಗೊಂಡಿದ್ದೇನೆ. ಚಲನಚಿತ್ರ ನಿರ್ಮಾಣ ಮಾಡುವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದೇ ಲಾಭಕ್ಕಾಗಿ ಜಾತಿ/ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಇದೀಗ ಇವರ ಈ ಪೋಸ್ಟ್ಗೆ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆ ಶುರುವಾಗಿದೆ.
100 ಕೋಟಿ ಕ್ಲಬ್: ಜುಲೈ 28ರಂದು ಜಗತ್ತಿನೆಲ್ಲೆಡೆ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದ 'ವಿಕ್ರಾಂತ್ ರೋಣ' ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಕರ್ನಾಟಕದಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಮೊದಲ ದಿನ ರಾಜ್ಯದಲ್ಲಿ 2,500 ಶೋಗಳು ಪ್ರದರ್ಶನಗೊಂಡಿದ್ದವು. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್ನಲ್ಲಿ 800 ಶೋ ಪ್ರದರ್ಶನವಾಗಿತ್ತು. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಚಿತ್ರ ಪ್ರಾರಂಭಿಸಲಾಗಿತ್ತು. ಸದ್ಯ ವಾರ ಕಳೆಯಲು ಸನಿಹಕ್ಕೆ ಬಂದಿರುವ ಚಿತ್ರ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ವರ್ಷನ್‌ನ ಕಲೆಕ್ಷನ್‌ನಲ್ಲಿ ‘ವಿಕ್ರಾಂತ್ ರೋಣ’ ಮುಂದಿದೆ.
ಇದನ್ನೂ ಓದಿ:ಮಹಾರಾಜ ಟ್ರೋಫಿ: 6 ತಂಡಗಳ ನಾಯಕರ ಘೋಷಿಸಿ, ಟ್ರೋಫಿ ಅನಾವರಣಗೊಳಿಸಿದ ನಟ ಸುದೀಪ್