ಬೆಂಗಳೂರು: ವಿವಾದಿತ ಟ್ವಿಟರ್ ಪೋಸ್ಟ್ ಪ್ರಕರಣದಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ಇಂದು ಬಂಧಿಸಿದ್ದಾರೆ.
ಚೇತನ್ ಅವರು ಹಿಂದೂಗಳ ಭಾವನೆಗೆ ಧಕ್ಕೆ ತರುವ ಪೋಸ್ಟ್ ಹಾಕಿದ್ದರು ಎಂದು ಹಿಂದೂಪರ ಕಾರ್ಯಕರ್ತ ಶಿವಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಇದರನ್ವಯ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಚೇತನ್ ಅವರನ್ನು ಬಂಧಿಸಿದ ಪೊಲೀಸರು ನಗರದ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಎಫ್ಐಆರ್ನಲ್ಲೇನಿದೆ?: ನಟ ಚೇತನ್ ಅವರು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಜಾತಿ, ಜಾತಿಗಳ ನಡುವೆ ವೈಮನಸ್ಸು ಉಂಟು ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ. ಸಮಾಜದ ಶಾಂತಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ವಿವಿಧ ಕೋಮುಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡಿರುವ ಚೇತನ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಶಿವಕುಮಾರ್ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ್ದ ನಟ:2007ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಚೇತನ್ ಕೆಲ ಕಾಲ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದರು. ಬಿರುಗಾಳಿ, ಸೂರ್ಯಕಾಂತಿ, ದಶಮುಖ, ಮೈನಾ, ನೂರೊಂದು ನೆನಪು, ಅಥಿರಥ, ರಣಮ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಗೆ ಜನಪ್ರಿಯತೆ ಪಡೆದು, ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.
ಸಮಾಜ ಸೇವೆ, ಹೋರಾಟಗಳು..ಕೆಲ ಸಿನಿಮಾಗಳಲ್ಲಿ ನಟಿಸಿದ ಬಳಿಕ ಸಾಮಾಜಿಕ ಹೋರಾಟಗಾರನಾಗಿ ಗುರತಿಸಿಕೊಂಡರು. 2016ರಲ್ಲಿ ಕೊಡುಗು ಜಿಲ್ಲೆಯ ದಿಡ್ಡಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನ ತೆರೆವುಗೊಳಿಸಲು ಅಂದಿನ ಸರ್ಕಾರ ಮುಂದಾಗಿತ್ತು. ಈ ಸರ್ಕಾರದ ವಿರುದ್ಧ ಅಲ್ಲಿನ ಆದಿವಾಸಿಗಳು ತೀವ್ರ ಪ್ರತಿಭಟನೆ ಮಾಡುತ್ತಿದ್ದರು. ಆಗ ಆದಿವಾಸಿಗಳ ಕೂಗಿಗೆ ನಟ ಚೇತನ್ ಆದಿವಾಸಿಗಳ ಪರವಾಗಿ ನಿಂತು ಹಗಲು ರಾತ್ರಿ ಅವರ ಪರ ಹೋರಾಟ ಮಾಡಿದ್ದರು. ಈ ಆದಿವಾಸಿಗಳ ಹೋರಾಟಕ್ಕೆ ಮಣಿದ ಸರ್ಕಾರ ಆದಿವಾಸಿಗಳಿಗೆ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನ ಹಿಂಪಡೆದಿದ್ದರು. ಅಂದು ಆದಿವಾಸಿಗಳ ಹೋರಾಟಕ್ಕೆ ಜಯ ಸಿಕ್ಕ ಹಿನ್ನೆಲೆಯಲ್ಲಿ ನಟ ಚೇತನ್ ಹೋರಾಟಕ್ಕೆ ಫಲ ಸಿಕ್ಕಿ, ಅವರು ಸಾಮಾಜಿಕ ನ್ಯಾಯಕ್ಕಾಗಿ ಮುಂದಡಿ ಇಡಲು ಕಾರಣವಾಯಿತು.