ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ವಿರುದ್ಧ ಕೆಲ ದಿನಗಳ ಹಿಂದೆ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ವಸತಿ ಫ್ಲಾಟ್ಗಳ ಹೆಸರಲ್ಲಿ 28 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಂದು ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನುಸ್ರತ್ ಜಹಾನ್ ಅವರು ಇಂದು ಬೆಳಗ್ಗೆ ಕೋಲ್ಕತ್ತಾ ಸಾಲ್ಟ್ ಲೇಕ್ನ ಸಿಜಿಒ ಕಾಂಪ್ಲೆಕ್ಸ್ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ವರದಿಗಳ ಪ್ರಕಾರ, ಫ್ಲಾಟ್ಗಳ ಖರೀದಿ ಮತ್ತು ಮಾರಾಟದ ಬಗ್ಗೆ ನುಸ್ರತ್ ಜಹಾನ್ ಅವರನ್ನು ಇಂದು ವಿಚಾರಣೆ ನಡೆಸಲಾಗುವುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ನ್ಯೂ ಟೌನ್ನಲ್ಲಿ ವಸತಿ ಫ್ಲಾಟ್ಗಳ ಹೆಸರಿನಲ್ಲಿ ಒಟ್ಟು 429 ಜನರಿಗೆ ವಂಚಿಸಲಾಗಿದೆ ಎಂದು ದೂರಲಾಗಿದೆ. ನಟಿ, ಸಂಸದೆ ನುಸ್ರತ್ ಜಹಾನ್ ಗರಿಯಾಹತ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಸಂಸ್ಥೆಯ ನಿರ್ದೇಶಕರಲ್ಲಿ ನುಸ್ರತ್ ಜಹಾನ್ ಕೂಡ ಒಬ್ಬರು.
ಇದನ್ನೂ ಓದಿ:ನುಸ್ರತ್ ಜಹಾನ್ ಮಗುವಿನ ತಂದೆಯ ಕುರಿತಾದ ಊಹಾಪೋಹಕ್ಕೆ ತೆರೆ: ಶಿಶು ಜನನ ಪ್ರಮಾಣ ಪತ್ರದಲ್ಲೇನಿದೆ?
ಹೀಗಾಗಿ ವಂಚನೆಗೊಳಗಾದವರು ಕೆಲವು ದಿನಗಳ ಹಿಂದೆ ಗರಿಯಾಹತ್ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಲಿಖಿತ ದೂರು ದಾಖಲಿಸಿದ್ದರು. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಅಲಿಪುರ ನ್ಯಾಯಾಲದಲ್ಲಿ ಪ್ರಕರಣವೂ ದಾಖಲಾಗಿತ್ತು. ನುಸ್ರತ್ ಜಹಾನ್ ಅವರ ಕಂಪನಿಯು ವಸತಿ ಗೃಹಗಳ ಹೆಸರಿನಲ್ಲಿ ತಲಾ 5 ಲಕ್ಷ 55 ಸಾವಿರ ರೂಪಾಯಿಗಳನ್ನು ತೆಗೆದುಕೊಂಡಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ 2018ರಲ್ಲಿ 3 ಬಿಎಚ್ಕೆ ಫ್ಲಾಟ್ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇದಾಗಿ ಐದು ವರ್ಷ ಕಳೆದರೂ ಇನ್ನೂ ವಸತಿ ಸೌಲಭ್ಯ ಸಿಕ್ಕಿಲ್ಲ. ಆದ್ದರಿಂದ ಪೊಲೀಸ್ ಹಾಗೂ ಕಾನೂನು ಮೊರೆ ಹೋಗಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಆರೋಪ ತಳ್ಳಿಹಾಕಿದ್ದ ಸಂಸದೆ: ಈ ವಿಚಾರವಾಗಿ ಇಂದು ನಟಿ, ಸಂಸದೆ ನುಸ್ರತ್ ಜಹಾನ್ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪವನ್ನು ನಟಿ ನುಸ್ರತ್ ತಳ್ಳಿ ಹಾಕಿದ್ದರು. ಆಗಸ್ಟ್ 2ರಂದು ಕೋಲ್ಕತ್ತಾದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು ಈ ವಿಚಾರದಲ್ಲಿ ನನ್ನದು ತಪ್ಪಿಲ್ಲ ಎಂದು ಹೇಳಿದ್ದರು. ಅಲ್ಲದೇ, ಮಾರ್ಚ್ 2017ರಲ್ಲಿ ರಿಯಲ್ ಎಸ್ಟೇಟ್ ಕಂಪನಿಯ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದರು. ಈ ಕಂಪೆನಿಯಿಂದ ಸಾಲ ಪಡೆದಿರುವುದು ನಿಜ. ಆದರೆ, ಮೇ 2017ರಲ್ಲೇ ಅದನ್ನು ಮರುಪಾವತಿಸಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ:ರಾಜಕೀಯ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗಲು ಸಿದ್ಧವಾದ್ರಾ ಟಿಎಂಸಿ ಸಂಸದೆ ನುಸ್ರತ್ ಜಹಾನ್!?