ಕನ್ನಡ ಚಿತ್ರರಂಗದ ಹಿರಿಯ, ಪ್ರತಿಭಾವಂತ ನಟ ಅನಂತ್ ನಾಗ್. ವಿಶಿಷ್ಟ ಅಭಿನಯ ಹಾಗೂ ಆಕರ್ಷಕ ವ್ಯಕ್ತಿತ್ವದ ಮೂಲಕ ಜಂಟಲ್‌ಮ್ಯಾನ್ ಎನಿಸಿಕೊಂಡಿರುವವರು. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅನಂತ್ ನಾಗ್ ಗೌರವದ ಪ್ರತೀಕವೆಂದೇ ಹೇಳಲಾಗುತ್ತದೆ. ಸುಮಾರು ನಾಲ್ಕೂವರೆ ದಶಕದಿಂದ ಭಾರತೀಯ ಸಿನಿಮಾ ಲೋಕದಲ್ಲಿ ತೊಡಗಿಕೊಂಡಿರುವ ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗು ಮರಾಠಿ ಭಾಷೆ ಸೇರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅನಂತ್ ನಾಗ್ ಚಿತ್ರರಂಗಕ್ಕೆ ಕೊಟ್ಟಿರುವ ಅಪಾರ ಕೊಡುಗೆಗಳನ್ನು ಗುರುತಿಸಿ ದೇಶದ ಅತ್ಯುನ್ನತ ಪದ್ಮಪ್ರಶಸ್ತಿ ನೀಡಬೇಕು ಎಂದು ಚಿತ್ರರಂಗವಲ್ಲದೇ ರಾಜ್ಯದ ಜನತೆ ಸೋಶಿಯಲ್ ಮೀಡಿಯಾದಲ್ಲಿ 'Padma Awards ಅನಂತ್ ನಾಗ್' ಎಂಬ ಅಭಿಯಾನ ಶುರು ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮಾಧ್ಯಮ ಅಕಾಡೆಮಿಯ ಅರಗಿಣಿ ದತ್ತಿ ಪ್ರಶಸ್ತಿಯನ್ನು ಸಿನಿಮಾ ಪತ್ರಕರ್ತರಾದ ಜೋಗಿ, ರಘುನಾಥ್ ಜಹ, ಗಣೇಶ್ ಕಾಸರಗೋಡು, ಶರಣ್ ಹುಲ್ಲೂರು ಅವರಿಗೆ ಘೋಷಿಸಲಾಗಿದ್ದು, ಇಂದು ಫಿಲ್ಮ್ ಚೇಂಬರ್ನಲ್ಲಿ ಅನಂತ್ ನಾಗ್ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅನಂತ್ ನಾಗ್, ನಾನು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಮುಖ ಕಾರಣ ಪತ್ರಕರ್ತರು. ನನ್ನ ಮೊದಲ ಸಿನಿಮಾ ಸಂಕಲ್ಪ ಚಿತ್ರದಿಂದ ಈವರೆಗೂ ಅವರೊಂದಿಗೆ ಆತ್ಮೀಯತೆ ಹೆಚ್ಚಾಗುತ್ತಲೇ ಇದೆ. ಮೊದಲ ಚಿತ್ರದ ಪತ್ರಿಕಾಗೋಷ್ಠಿಯ ದಿನ ಯಾರು ಏನು ಪ್ರಶ್ನೆ ಕೇಳ್ತಾರೆಂದು ನಾನು ಬಹಳ ಹೆದರಿಕೊಂಡಿದ್ದೆ. ಆದರೆ ಅಂದಿನ ಕೆಲವು ಪತ್ರಕರ್ತರು ಯಾವುದೇ ಭಯ ಇಲ್ಲದೇ ಮಾತನಾಡಿ ಅಂತಾ ನನಗೆ ಧೈರ್ಯ ತುಂಬಿದ್ದರು. ಅಲ್ಲಿಂದ ಈವರೆಗೆ ಆ ಬಾಂಧವ್ಯ ಬೆಳೆದುಕೊಂಡು ಬಂದಿದೆ ಎಂದರು. ಕಷ್ಟದಲ್ಲಿರುವ ಪತ್ರಕರ್ತರಿಗೆ ನಮ್ಮ ಕಡೆಯಿಂದ ಹಾಗೂ ಚಿತ್ರರಂಗದ ಅನೇಕ ವಿಭಾಗಗಳಿಂದ ಸಹಾಯ ಮಾಡಲು ನಾವು ಸಿದ್ಧ. ಈ ವಿಚಾರವಾಗಿ ಮಂಡಳಿ ಮುಂದಾಳತ್ವ ವಹಿಸಬೇಕು ಎಂದರು.
ಪದ್ಮಶ್ರೀ ಹಾಗು ಪದ್ಮಭೂಷಣ ಪ್ರಶಸ್ತಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ದಯವಿಟ್ಟು ಅನಂತ್ ನಾಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಗ್ಗೆ ಯಾರೂ ಕೂಡ ಅಭಿಯಾನವನ್ನು ಮತ್ತೆ ಆರಂಭಿಸಬೇಡಿ. ನೀವು ಅಭಿಯಾನ ಮಾಡಿ ಮತ್ತೆ ಆ ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲಾ ಅಂದಾಗ ನಿಜವಾಗ್ಲೂ ಬೇಸರ ಆಗುತ್ತೆ. ಹಾಗಾಗಿ ಅಭಿಯಾನವನ್ನು ನಿಲ್ಲಿಸಿ. ಆ ಪ್ರಶಸ್ತಿ ಬಗ್ಗೆ ಮಾನ್ಯತೆ ಕೊಟ್ಟರೆ ಒಳ್ಳೆಯದು. ಏಕೆಂದ್ರೆ ಈ ಪ್ರಶಸ್ತಿ ಹಿಂದೆ ಬೇರೆ ಬೇರೆ ಲೆಕ್ಕಾಚಾರಗಳು ಇರುತ್ತವೆ. ಅದನ್ನು ಗುರುತಿಸಬೇಕು ಎಂದರು.