ಅಲಪ್ಪುಳ(ಕೇರಳ): ವಿದ್ಯಾರ್ಥಿನಿಯೊಬ್ಬರಿಗೆ ಸಹಾಯ ಹಸ್ತ ಚಾಚುವ ಮೂಲಕ ದಕ್ಷಿಣ ಭಾರತದ ಸ್ಟಾರ್ ನಟ ಅಲ್ಲು ಅರ್ಜುನ್ ತಾನು ನಿಜ ಜೀವನದಲ್ಲೂ ಹೀರೋ ಎಂದು ಸಾಬೀತು ಪಡಿಸಿದ್ದಾರೆ. ನರ್ಸಿಂಗ್ ಅಧ್ಯಯನವನ್ನು ಮುಂದುವರಿಸಲು ದಾರಿ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕೇರಳದ ವಿದ್ಯಾರ್ಥಿಯ ಎಲ್ಲಾ ಖರ್ಚುಗಳನ್ನು ಭರಿಸುವ ಮೂಲಕ ನಾಲ್ಕು ವರ್ಷಗಳ ಅವಧಿಯ ಕೋರ್ಸ್ ಅನ್ನು ಪ್ರಾಯೋಜಿಸುವ ಭರವಸೆ ನೀಡಿದ್ದಾರೆ.
ಪಿಯುಸಿ ಅಲ್ಲಿ ಶೇ.92ರಷ್ಟು ಅಂಕ ಗಳಿಸಿದ್ದರೂ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಸಹಾಯ ಮಾಡಲು ಪುಷ್ಪ ನಟ ಅಲ್ಲು ಅರ್ಜುನ್ ಮುಂದಾಗಿದ್ದಾರೆ. ಅಲಪ್ಪುಳ ಜಿಲ್ಲಾಧಿಕಾರಿ ಕೃಷ್ಣ ತೇಜಾ ಅವರು ವಿದ್ಯಾರ್ಥಿನಿಯ ಕಥೆ ವಿವರಿಸಿ ವೈಯಕ್ತಿಕ ಮನವಿ ಮಾಡಿದ ನಂತರ ಅಲ್ಲು ಅರ್ಜುನ್ ವಿದ್ಯಾರ್ಥಿಯ ಸಹಾಯಕ್ಕೆ ಬಂದಿದ್ದಾರೆ. ಅಲ್ಲು ಅರ್ಜುನ್ ಅವರು 'ವಿ ಫಾರ್ ಅಲೆಪ್ಪಿ' ಯೋಜನೆಯ ಭಾಗವಾಗಿ ವಿದ್ಯಾರ್ಥಿಯ ನರ್ಸಿಂಗ್ ಕೋರ್ಸ್‌ನ ಎಲ್ಲ ವೆಚ್ಚವನ್ನು ಭರಿಸಲು ಒಪ್ಪಿಕೊಂಡಿದ್ದಾರೆ.
ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬಸ್ಥರು ಕೆಲ ದಿನಗಳ ಹಿಂದೆ ಡಿಸಿ ಕೃಷ್ಣ ತೇಜಾ ಅವರನ್ನು ಭೇಟಿ ಮಾಡಿ, ಶಿಕ್ಷಣ ಮುಂದುವರಿಸಲು ಸಹಾಯವನ್ನು ಕೋರಿದರು. ನಂತರ ಜಿಲ್ಲಾಧಿಕಾರಿ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿ ವಿದ್ಯಾರ್ಥಿನಿಯ ಕುರಿತು ಮಾಹಿತಿ ಹಂಚಿಕೊಂಡರು. ಬಳಿ ನಟ ಅಲ್ಲು ಅರ್ಜುನ್ ನಾಲ್ಕು ವರ್ಷಗಳ ನರ್ಸಿಂಗ್ ಕೋರ್ಸ್‌ಗೆ ಶುಲ್ಕ ಮತ್ತು ಹಾಸ್ಟೆಲ್ ಶುಲ್ಕ ಪಾವತಿಸಲು ಒಪ್ಪಿಕೊಂಡರು.
ಈ ಬಗ್ಗೆ ಜಿಲ್ಲಾಧಿಕಾರಿ ಕೃಷ್ಣ ತೇಜಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ''ಕೆಲ ದಿನಗಳ ಹಿಂದೆ ಅಲಪ್ಪುಳದ ವಿದ್ಯಾರ್ಥಿನಿಯೊಬ್ಬರು ನನ್ನನ್ನು ಭೇಟಿಯಾಗಲು ಬಂದಿದ್ದರು. ಆಕೆ ಪಿಯುಸಿ ಅಲ್ಲಿ ಶೇ. 92ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಆದರೆ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಪರಿಸಸ್ಥಿತಿ ಸಹಕರಿಸುತ್ತಿಲ್ಲ. 2021ರಲ್ಲಿ ಕೋವಿಡ್‌ಗೆ ತುತ್ತಾಗಿ ಅವರ ತಂದೆ ಮೃತಪಟ್ಟಿದ್ದು, ಕುಟುಂಬ ಕಷ್ಟದಲ್ಲಿದೆ. ನಾನು ಆ ಹುಡುಗಿಯ ಕಣ್ಣಲ್ಲಿ ಸಾಧಿಸುವ ಛಲ ಕಂಡೆ. ಅವಳಿಗೆ 'ವಿ ಫಾರ್ ಅಲೆಪ್ಪಿ' ಯೋಜನೆಯಡಿ ಸಹಾಯ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ:'ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ': ವಿವಾದ ಸೃಷ್ಟಿಸಿದವರಿಗೆ ಡಾಲಿ ಟಾಂಗ್
ಆಕೆ ನರ್ಸ್ ಆಗುವ ಇಂಗಿತ ವ್ಯಕ್ತಪಡಿಸಿದರು. ನರ್ಸ್ ಮೆರಿಟ್ ಸೀಟ್‌ಗಳಿಗೆ ಅರ್ಜಿ ಸಲ್ಲಿಸುವ ಸಮಯ ಈಗಾಗಲೇ ಮುಗಿದಿದೆ. ಹಾಗಾಗಿ ನಾವು ವಿದ್ಯಾರ್ಥಿನಿಯ ಕನಿಷ್ಠ ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೀಟು ಕೊಡಿಸುವ ಪ್ರಯತ್ನ ಮಾಡಿದೆವು. ನಾವು ಅನೇಕ ಕಾಲೇಜುಗಳನ್ನು ಸಂಪರ್ಕಿಸಿದೆವು.
ಅಂತಿಮವಾಗಿ ಕತ್ತನಂ ಸೇಂಟ್ ಥಾಮಸ್ ನರ್ಸಿಂಗ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡಿದ್ದೇವೆ. ನಾವು ಸಹಾಯಕರನ್ನು ಹುಡುಕಲು ಪ್ರಾರಂಭಿಸಿದೆವು. ಬಳಿಕ ನಟ ಅಲ್ಲು ಅರ್ಜುನ್‌ರನ್ನು ಸಂಪರ್ಕಿಸಿದೆ. ಅವರು ಕೇವಲ ಒಂದು ವರ್ಷವಲ್ಲ, ನಾಲ್ಕು ವರ್ಷಗಳ ಕಾಲದ ಶಿಕ್ಷಣ ವೆಚ್ಚವನ್ನು ಭರಿಸಲು ಒಪ್ಪಿದರು. ನಾನು ಖುದ್ದಾಗಿ ಹೋಗಿ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಸೇರಿಸಿ ಬಂದೆ" ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.