ಮುಂಬೈನಲ್ಲಿ ಜನಪ್ರಿಯ ನಟ, ಮಾಡೆಲ್ ಮತ್ತು ಕಾಸ್ಟಿಂಗ್ ಸಂಯೋಜಕರಾಗಿದ್ದ ಆದಿತ್ಯ ಸಿಂಗ್ ರಜಪೂತ್ (32) ಅವರು ಸ್ನಾನ ಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸ್ನೇಹಿತ ಆದಿತ್ಯ ಸಿಂಗ್ ಮನೆಯಲ್ಲಿ ಬಿದ್ದಿರುವುದು ಕಂಡಿದ್ದಾರೆ. ಕಟ್ಟಡದ ಕಾವಲುಗಾರನ ಸಹಕಾರ ಪಡೆದು ಹತ್ತಿರದ ಆಸ್ಪತ್ರೆಗೆ ಸ್ನೇಹಿತನನ್ನು ಕರೆದೊಯ್ದಿದಿದ್ದಾರೆ. ಆದರೆ, ಆಸ್ಪತ್ರೆಗೆ ತೆರಳುವ ಮೊದಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ನಟನ ಸಾವಿನ ಹಿಂದೆ ಮಿತಿಮೀರಿದ ಡ್ರಗ್ಸ್ ಸೇವನೆ ಕಾರಣ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ.
ಎಂಟಿವಿ ಸ್ಟಾರ್ ಪ್ರಸಿದ್ಧ ನಟ, ರೂಪದರ್ಶಿ ಮತ್ತು ಕಾಸ್ಟಿಂಗ್ ನಿರ್ದೇಶಕರಾಗಿದ್ದರು. ಆದಿತ್ಯ ಸಿಂಗ್ ರಜಪೂತ್ ಸಾವಿನ ಸುದ್ದಿಯಿಂದ ಅವರ ಅಭಿಮಾನಿಗಳು ಕೂಡ ಆಘಾತಕ್ಕೊಳಗಾಗಿದ್ದಾರೆ. ವರದಿಗಳ ಪ್ರಕಾರ, ಸೋಮವಾರ ಮಧ್ಯಾಹ್ನ ಆದಿತ್ಯ ಅವರ ಅಂಧೇರಿ ಮನೆಯ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಆದಿತ್ಯ ಅವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದ್ದರೆ, ನಟ ಮುಂಬೈನ ಅಂಧೇರಿ ಲೋಖಂಡವಾಲಾದಲ್ಲಿರುವ ಲಷ್ಕರಿಯಾ ಹೈಟ್ಸ್ ಎಂಬ ಕಟ್ಟಡದಲ್ಲಿ ರೂಮ್‌ಮೇಟ್‌ನೊಂದಿಗೆ ವಾಸಿಸುತ್ತಿದ್ದರು. ಮುಂಬೈ ಪೊಲೀಸರ ಓಶಿವಾರ ಪೊಲೀಸರು ಈ ಬಗ್ಗೆ ತನಿಖೆ ನಡೆಸಲು ತಂಡವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣದಲ್ಲಿ ಅನುಮಾನಾಸ್ಪದ ಸಂಗತಿ ಕಂಡು ಬಂದಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಐದು ದಿನಗಳ ಹಿಂದೆ ನಟ ತನ್ನ ಇನ್ಸ್ಟಾಗ್ರಾಂನಲ್ಲಿ ಕೊನೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಸಂತೋಷದ ಅರ್ಥವೇನೆಂದು ಬರೆದುಕೊಂಡಿದ್ದಾರೆ. ನಟ ಹಂಚಿಕೊಂಡ ರೀಲ್‌ನಲ್ಲಿ, "ನನಗೆ ಸಂತೋಷ ಎಂದರೆ ತಾಯಿಯ ಕೈಯಿಂದ ಕೈತುತ್ತು ತಿನ್ನುವುದು, ನಾಯಿಯೊಂದಿಗೆ ಸಮಯ ಕಳೆಯುವುದು, ಸ್ನೇಹಿತರೊಂದಿಗೆ ಚಲನಚಿತ್ರಗಳನ್ನು ನೋಡುವುದು. ಆದರೆ ಹಣವೂ ಮುಖ್ಯ. ಆದರೆ, ಆಂತರಿಕ ಶಾಂತಿ ಕೂಡ ಬಹಳ ಮುಖ್ಯ" ಎಂದು ಹೇಳಿಕೊಂಡಿದ್ದಾರೆ.