ಕನ್ನಡ ಚಿತ್ರರಂಗದಲ್ಲಿ ಡೆಡ್ಲಿ ಸೋಮ ಅಂತಾ ಪ್ರಖ್ಯಾತಿ ಪಡೆದಿರುವ ನಟ ಆದಿತ್ಯ. ಬೆಂಗಳೂರು ಅಂಡರ್ ವರ್ಲ್ಡ್ ಚಿತ್ರದ ಬಳಿಕ ಇವರು ಟೆರರ್ ಎಂಬ ಚಿತ್ರದ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಮಾಸ್ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಟೆರರ್ ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆಯಿತು. ಕೆ.ಆರ್.ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಅವರು ಕ್ಯಾಮರಾ ಚಾಲನೆ ಮಾಡಿದರು.
ಯಂಗ್ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಆದಿತ್ಯ:ಈ ಸಿನಿಮಾ ಬಗ್ಗೆ ಮೊದಲು ಮಾತನಾಡಿದ ನಟ ಆದಿತ್ಯ, "ನಟ ಧರ್ಮ ಅವರ ಮೂಲಕ ರಂಜನ್ ಪರಿಚಯವಾಯಿತು. ಅವರು ಹೇಳಿದ ಕಥೆ ಬಹಳ ಹಿಡಿಸಿತು. ಚಿತ್ರ ಎರಡು ಶೇಡ್ಗಳಲ್ಲಿರುತ್ತದೆ. ಪಾತ್ರ ಬಹಳ ಸ್ಟೈಲಿಶ್ ಆಗಿರುತ್ತದೆ. ಯಂಗ್ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದರು.
ಟೆರರ್ ಚಿತ್ರತಂಡ: ನಿರ್ದೇಶಕ ರಂಜನ್ ಶಿವರಾಮ ಗೌಡ ಮಾತನಾಡಿ, "ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಮಾಫಿಯಾ ಸುತ್ತ ಕಥೆ ಇದೆ. ಆದಿತ್ಯ ಅವರಿಗೆ ಕಥೆ ಇಷ್ಟವಾಯಿತು. ಗ್ಯಾಂಗ್ಸ್ಟರ್ ಪಾತ್ರದಲ್ಲಿ ಅದ್ಭುತವಾಗಿ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತದೆ. ಸಿಲ್ಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಲಿದ್ದಾರೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ನಮ್ಮ ಚಿತ್ರಕ್ಕಿದೆ. ಧರ್ಮ, ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ" ಎಂದು ತಿಳಿಸಿದರು.