ಕರ್ನಾಟಕದಾದ್ಯಂತ ಕಾವೇರಿ ಕಿಚ್ಚು ಜೋರಾಗಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಸೆಪ್ಟೆಂಬರ್ 29ರಂದು ರಾಜ್ಯ ಬಂದ್ ಕೂಡ ಮಾಡಲಾಗಿತ್ತು. ಅನ್ನದಾತರು, ಕನ್ನಡ ಪರ ಸಂಘಟನೆಗಳಿಗೆ ಕನ್ನಡ ಚಿತ್ರರಂಗದವರು ಬೆಂಬಲವಾಗಿ ನಿಂತು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಈಗಾಗಲೇ ಹೋರಾಟಗಳಲ್ಲಿ ಭಾಗಿಯಾಗಿದ್ದ ನಟ ಅಭಿಷೇಕ್ ಅಂಬರೀಶ್ ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಕಾವೇರಿ ಹೋರಾಟಕ್ಕೆ ಮತ್ತೊಮ್ಮೆ ಬೆಂಬಲ ಸೂಚಿಸಿದ್ದಾರೆ.
ಅಕ್ಟೋಬರ್ 3ರಂದು ಜೂನಿಯರ್ ರೆಬಲ್ ಸ್ಟಾರ್ ಜನ್ಮದಿನ. ಪ್ರತಿ ವರ್ಷವು ಅಭಿಷೇಕ್, ಜೆ.ಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತ್ಡೇ ಆಚರಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅವಿವಾ ಬಿದ್ದಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಭಿಷೇಕ್ಗೆ ಈ ವರ್ಷದ ಹುಟ್ಟುಹಬ್ಬವಂತು ತುಂಬಾ ಸ್ಪೆಷಲ್. ಆದರೆ, ಅವರು ತಮ್ಮ 30ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಲು ಒಲ್ಲೆ ಎಂದಿದ್ದಾರೆ. ಕನ್ನಡಿಗರು ಕಾವೇರಿಗಾಗಿ ನಡೆಸುತ್ತಿರುವ ಹೋರಾಟದ ಮಧ್ಯೆ ಬರ್ತ್ಡೇ ಗ್ರ್ಯಾಂಡ್ ಆಗಿ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡಿರುವ ಅಭಿಷೇಕ್ ಅಂಬರೀಶ್, "ಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದರಿಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಛಿಸಿದ್ದೇನೆ. ಎಲ್ಲಾ ರೆಬೆಲ್ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ, ಆಶೀರ್ವದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೂ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ, ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನು ತರದೆ ಬಂದು ಶುಭ ಹಾರೈಸಿ. - ಇಂತಿ ನಿಮ್ಮ ಪ್ರೀತಿಯ ಅಭಿಷೇಕ್ ಅಂಬರೀಶ್" ಎಂದು ಬರೆದುಕೊಂಡಿದ್ದಾರೆ.