ನಿಖಿಲ್ ಕುಮಾರಸ್ವಾಮಿ ಸದ್ಯ ಸಖತ್ ಬ್ಯುಸಿ ಆಗಿದ್ದಾರೆ. ಅತ್ತ ರಾಜಕೀಯ ಗಣ್ಯರ ಭೇಟಿ, ದೆಹಲಿ ಪ್ರವಾಸ ಹೀಗೆ ಒಂದಲ್ಲ ಒಂದು ರೀತಿ ರಾಜಕೀಯ ವಿಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಒಂದು ಕಡೆ ರಾಜಕೀಯದ ಕೆಲಸ ಇನ್ನೊಂದೆಡೆ ಈಗಾಗಲೇ ಅನೌನ್ಸ್ ಮಾಡಿ ಶೂಟಿಂಗ್ ಶುರು ಮಾಡಿರುವ ಸಿನಿಮಾ ಕಂಪ್ಲೀಟ್ ಮಾಡುವ ತರಾತುರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಇದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ನಿಖಿಲ್ ಪ್ರಚಾರದ ಜೊತೆ ಚುನಾವಣೆಗಾಗಿ ವೇದಿಕೆ ಸಿದ್ಧಪಡಿಸಬೇಕಿದೆ. ಹಾಗಾಗಿ ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.
ಸದ್ಯ ಲೈಕಾ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ಲಕ್ಷ್ಮಣ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಸೆಕೆಂಡ್ ಶೆಡ್ಯೂಲ್ ಕೂಡಾ ಆರಂಭವಾಗಿದೆ. ಐದು ತಿಂಗಳಲ್ಲಿ ಈ ಸಿನಿಮಾ ಕಂಪ್ಲೀಟ್ ಮಾಡಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಂಡಿರುವ ಚಿತ್ರ ತಂಡ, ಬಿರುಸಿನಿಂದ ಶೂಟಿಂಗ್ ಕೆಲಸವನ್ನು ಕೈಗೊಂಡಿದೆ. ಈ ನಡುವೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ.
ನಿಖಿಲ್ ಹಾಗೂ ಧ್ರುವಾ ಸರ್ಜಾ ಒಟ್ಟಿಗೆ ಕಾಣಿಸಿಕೊಂಡಿದ್ದು ತೀರ ಕಡಿಮೆಯೇ ಎನ್ನಬಹುದು. ಆದರೆ, ಇದೇ ಮೊದಲ ಬಾರಿಗೆ ಇಬ್ಬರು ಭೇಟಿ ಮಾಡಿದ್ದಾರೆ. ಇದು ಅವರ ಅಭಿಮಾನಿ ಒಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನಿಖಿಲ್ ಭೇಟಿ ಮಾಡಿದ ಧ್ರುವಾ ಕೆಲ ಸಮಯ ಮಾತುಕತೆ ನಡೆಸಿದರು. ಇದೇ ಸಮಯದಲ್ಲಿ ನಿಖಿಲ್ ಅವರ ಹೊಸ ಸಿನಿಮಾ ಬಗ್ಗೆ ಹಾಗೂ ಧ್ರುವಾ ಅವರ ಮಾರ್ಟಿನ್ ಚಿತ್ರದ ಬಗ್ಗೆ ಪರಸ್ಪರ ಇಬ್ಬರೂ ನಾಯಕ ನಟರು ಚರ್ಚೆ ನಡೆಸಿದರು. ಇದಷ್ಟೇ ಅಲ್ಲದೆ ಇಬ್ಬರೂ ಒಂದಿಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡುತ್ತಾ ಕೆಲ ಸಮಯ ಕಳೆದಿದ್ದು ವಿಶೇಷವಾಗಿತ್ತು.