ಕನ್ನಡ ಚಿತ್ರರಂಗಕ್ಕೆ ಹೊಸ ಟ್ಯಾಲೆಂಟ್ ಇರುವ ಪ್ರತಿಭೆಗಳ ಎಂಟ್ರಿ ಆಗ್ತಾನೇ ಇದೆ. ಈ ಸಾಲಿನಲ್ಲಿ ನಟ ಹಾಗೂ ನಿರ್ದೇಶಕ ವಿಶೃತ್ ನಾಯಕ್ ಕೂಡ ಒಬ್ಬರು. ತಾನೇ ನಿರ್ದೇಶಿಸಿ ನಟಿಸಿದ ಮಂಜರಿ ಸಿನಿಮಾದಲ್ಲಿ ಅಭಿನಯಕ್ಕಾಗಿ 2017ರ ಸಾಲಿನಲ್ಲಿ ಅತ್ಯುತ್ತಮ ನಟ ಎಂಬ ರಾಜ್ಯ ಪ್ರಶಸ್ತಿಯನ್ನು ವಿಶೃತ್ ನಾಯಕ್ ಪಡೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಎರಡು ದಿನದ ಹಿಂದೆ ಮಂಜರಿ ಚಿತ್ರದಲ್ಲಿ ಅದ್ಭುತ ನಟನೆಗಾಗಿ ವಿಶೃತ್ ನಾಯಕ್ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಖುಷಿ ಹಂಚಿಕೊಳ್ಳುವುದಕ್ಕೆ ನಟ ಹಾಗೂ ನಿರ್ದೇಶಕ ವಿಶೃತ್ ನಾಯಕ್ ಮಾಧ್ಯಮದ ಮುಂದೆ ಬಂದಿದ್ದರು. ವಿಶೃತ್ ನಾಯಕ್ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೆ ಸಿನಿಮಾ ಇಂಡಸ್ಟ್ರಿಗೆ ಬಂದ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೂಲತಃ ಕುಣಿಗಲ್‌ನವರಾದ ವಿಶೃತ್ ನಾಯಕ್ ಸಿನಿಮಾಗೆ ಬರುವ ಮುಂಚೆ ಟ್ರಾವೆಲ್ಸ್ ಮಾಲೀಕನ ಕೆಲಸ ಮಾಡುತ್ತಿದ್ದರಂತೆ. ಈ ಕೆಲಸ ಮಾಡುವ ಜೊತೆಗೆ ಕವಿತೆ, ಕವನಗಳನ್ನು ಬರೆಯುತ್ತಿದ್ದ ವಿಶೃತ್ಗೆ ಸಿನಿಮಾಗೆ ಬರುವ ವ್ಯಾಮೋಹ ಹುಟ್ಟಿದೆ. ಜೊತೆಗೆ ಬರವಣಿಗೆ ನೋಡಿದ ಅವರ ಪತ್ನಿ ಡೈರೆಕ್ಷನ್ ಕಲಿಕಾ ಸಂಸ್ಥೆಗೆ ಸೇರಿಸಿದ್ದರಂತೆ. ಅಲ್ಲಿಂದ ಸಂಪೂರ್ಣವಾಗಿ ನಿರ್ದೇಶಕನಾಗುವ ಕೆಲಸಕ್ಕೆ ಕೈ ಹಾಕಿ, ರಿಂಗ್ ಮಾಸ್ಟರ್ ಎಂಬ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದರು.
ಈ ಚಿತ್ರದ ಬಳಿಕ ವಿಶೃತ್ ನಾಯಕ್ ಮಂಜರಿ ಸಿನಿಮಾ ನಿರ್ದೇಶನ ಮಾಡಿ, ನಟಿಸಿ ಸೈ ಎನಿಸಿಕೊಂಡರು. ಅದಕ್ಕೆ 2017ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಖುಷಿಯಲ್ಲಿರುವ ವಿಶೃತ್ ನಾಯಕ್ ಜಯರಾಮ್ ಕಾರ್ತಿಕ್ ಜೊತೆ ಕೂಡಾ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ.
ಇದನ್ನೂ ಓದಿ:'ಇಂಡಿಯನ್ ಪೊಲೀಸ್ ಫೋರ್ಸ್'ಗೆ ಭರ್ಜರಿ ಎಂಟ್ರಿ ಕೊಟ್ಟ ಒಬೆರಾಯ್!