ಸಿನಿಮಾ ರಂಗದ ನಟ- ನಟಿಯರು ರಾಜಕೀಯಕ್ಕೆ ಬರುವುದು ಹೊಸತೇನಲ್ಲ. ರಾಜ್ಯದಲ್ಲಿ ಮುಂದಿನ ವರ್ಷ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಈಗಾಗಲೇ ರಾಜ್ಯದ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳನ್ನ ಯಾರನ್ನ ನಿಲ್ಲಿಸಬೇಕು ಎಂಬ ಲೆಕ್ಕಾಚಾರದ ಜೊತೆಗೆ ಗೇಮ್ ಪ್ಲಾನಿಂಗ್ ನಡೆಯುತ್ತಿದೆ. ಅಷ್ಟರಲ್ಲೇ ನಟ ಡೈಲಾಗ್ ಕಿಂಗ್ ಮುಂಬರುವ ಚುನಾವಣೆಯ ಟಿಕೆಟ್ ಬಗ್ಗೆ ಮಾತನಾಡಿದ್ದಾರೆ.
ಹೌದು, ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಸಾಯಿಕುಮಾರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಾಯಿ ಕುಮಾರ್ ಮತ್ತೆ ಬಿಜೆಪಿಯವರು ಟಿಕೆಟ್ ಕೊಟ್ಟರೆ ಮುಂದಿನ ವರ್ಷ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಈಗಾಗಲೇ ಸಾಯಿಕುಮಾರ್ ತಮ್ಮ ತಾಯಿ ಊರು ಬಾಗೇಪಲ್ಲಿ ಕ್ಷೇತ್ರದಿಂದ 2008ನೇ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಪಕ್ಷದ ಬಗ್ಗೆ ಹೆಚ್ಚು ಒಲವಿಲ್ಲದ ಆ ಕ್ಷೇತ್ರದಲ್ಲಿ 28 ಸಾವಿರ ಮತ ಗಳಿಸಿದರು. ಇದಾಗಿ 2018ಲ್ಲಿ ಅದೇ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ನಿಂತಿದ್ದರು. ಆಂಧ್ರ ಬಾರ್ಡರ್ನಲ್ಲಿರುವ ಬಾಗೆಪಲ್ಲಿಯಲ್ಲಿ ತೆಲುಗು ಜನರು ತುಂಬಾ ಇದ್ದಾರೆ ಎಂಬ ಕಾರಣಕ್ಕೆ ಚುನಾವಣೆಗೆ ನಿಂತಿದ್ದರು ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಸುಬ್ಬಾರೆಡ್ಡಿ ವಿರುದ್ಧ ಸಾಯಿಕುಮಾರ್ ಮತ್ತೆ ಸೋಲು ಅನುಭವಿಸಬೇಕಾಯಿತು.
ಇದೀಗ ಮತ್ತೆ ಬಿಜೆಪಿ ಪಕ್ಷ ಟಿಕೆಟ್ ಕೊಟ್ಟರೆ ನಾನು ಸ್ಪರ್ಧೆ ಮಾಡುವುದಾಗಿ ಬೆಂಗಳೂರಿನಲ್ಲಿ ಸಾಯಿಕುಮಾರ್ ಮಾತನಾಡಿದ್ದಾರೆ. ಸದ್ಯ ಸಿನಿಮಾ ರಂಗದಲ್ಲಿ 50 ವರ್ಷಗಳನ್ನ ಪೂರೈಯಿಸಿರುವ ಡೈಲಾಗ್ ಕಿಂಗ್ಗೆ ಮತ್ತೆ ಬಿಜೆಪಿ ಪಕ್ಷ ಮಣೆ ಹಾಕುತ್ತಾ? ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.
ಓದಿ:ಶ್ರೀಮುರಳಿ ಹುಟ್ಟುಹಬ್ಬದಂದು ಸೆಟ್ಟೇರಿದ 'ಬಘೀರ'