ಆಚಾರ್ & ಕೋ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಸ್ಯಾಂಡಲ್ವುಡ್ ತಾರೆಯರು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಯ ಜೊತೆಗೆ ಹೊಸ ಪ್ರತಿಭೆಗಳನ್ನು ಗುರುತಿಸಿ, ಅವರೊಂದಿಗೆ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡುತ್ತಿರುವ ನಿರ್ಮಾಣ ಸಂಸ್ಥೆ ಅಂದ್ರೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಹೌಸ್. ಇದೀಗ ಮತ್ತೊಂದು ವಿಭಿನ್ನ ಕಥೆಯ ಜೊತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರಕ್ಕೆ ಆಚಾರ್ & ಕೋ ಎಂದು ಹೆಸರಿಡಲಾಗಿದ್ದು, ಸಿನ್ಸ್ 1971 ಎಂಬ ಟ್ಯಾಗ್ಲೈನ್ ಕೂಡ ಹೊಂದಿದೆ. ಈ ಸಿನಿಮಾವು ಇದೇ 28 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಇದಕ್ಕೂ ಮುನ್ನ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದ ತಾರೆಯರಿಗಾಗಿ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದರು.
ಬೆಂಗಳೂರಿನ ಕಾವೇರಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಆಚಾರ್ & ಕೋ ಸಿನಿಮಾವನ್ನು ವೀಕ್ಷಿಸಲು ಹಿರಿಯ ನಟ ಶ್ರೀನಾಥ್, ರಾಘವೇಂದ್ರ ರಾಜ್‍ಕುಮಾರ್, ಅಶ್ವಿನ್ ಪುನೀತ್ ರಾಜ್‍ಕುಮಾರ್, ಮಗಳು ಧೃತಿ, ವಿಜಯ ರಾಘವೇಂದ್ರ, ಸುಧಾರಾಣಿ, ಯುವ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್, ರಿಷಿ, ಸೋನು ಗೌಡ, ನಿಶ್ವಿಕಾ ನಾಯ್ಡು, ಧನ್ಯಾ ರಾಮ್ಕುಮಾರ್, ಸಪ್ತಮಿ ಗೌಡ, ಮೇಘನಾ ರಾಜ್, ಧೀರೇನ್ ರಾಮ್ಕುಮಾರ್, ನಿರೂಪ್ ಭಂಡಾರಿ, ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಸಿಂಪಲ್ ಸುನಿ, ಚೇತನ್ ಕುಮಾರ್, ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಸೇರಿದಂತೆ ಅನೇಕರು ಆಗಮಿಸಿದ್ದರು.
ಈ ಸಿನಿಮಾ ನೋಡಿದ ಪ್ರತಿಯೊಬ್ಬ ನಟರು ಕೂಡ, ಚಿತ್ರವು ನಮ್ಮ ಹಳೆಯ ಬೆಂಗಳೂರನ್ನು ನೆನಪಿಸುತ್ತೆ. ಹಾಗೆಯೇ ಪ್ರತಿಯೊಬ್ಬರ ಅಜ್ಜಿಯಂದಿರ ಮನೆಯನ್ನು ನೆನಪು ಮಾಡುತ್ತದೆ ಎಂದರು. ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿರುವ ಸಿಂಧು ಶ್ರೀನಿವಾಸಮೂರ್ತಿ ಆಚಾರ್ & ಕೋ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಮೊದಲಿಗೆ ಚಿತ್ರದ ಕುರಿತು ಮಾತು ಪ್ರಾರಂಭಿಸಿದ ಸಿಂಧು, "ಆಚಾರ್ & ಕೋ ಸಿನಿಮಾ 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಈ ಕಥೆ. ಸುಸಂಸ್ಕೃತ ಕುಟುಂಬದಲ್ಲಿ ಹತ್ತು ಜನ ಮಕ್ಕಳು ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಸಂಪ್ರದಾಯಗಳನ್ನೂ ಮೀರದೇ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನೂ ಹೇಗೆ ನಿಭಾಯಿಸಿ ಗೆಲ್ಲುತ್ತಾರೆ ಎಂಬುದನ್ನು ಹೇಳುವ ಒಂದು ಭಾವನಾತ್ಮಕ ಚಿತ್ರ" ಎಂದರು.
ಮುಂದುವರೆದು, "ಇನ್ನು ಸೂಕ್ತವಾದ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70ರ ದಶಕದ ಬೆಂಗಳೂರನ್ನು ತೆರೆಯ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ. ಈ ಕುಟುಂಬದ ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೇ ಗೊತ್ತಿಲ್ಲದಂತೆ ಅಂದಿನ ಕಾಲಕ್ಕೆ ಹೋಗುತ್ತಾರೆ. ಅರವತ್ತರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಹೇಗೆ ತಮ್ಮ ಜೀವನ ನಡೆಸಲು ಹೋರಾಟ ಮಾಡುತ್ತಾರೆ ಅನ್ನೋದು ಆಚಾರ್ & ಕೋ ಸಿನಿಮಾದಲ್ಲಿದೆ. ಈ ಚಿತ್ರದಲ್ಲಿ ಭಾವುಕತೆಯಷ್ಟೇ ಅಲ್ಲದೇ ಹಾಸ್ಯವೂ ಇದೆ. ಆಸಕ್ತಿಕರ ಸನ್ನಿವೇಶಗಳ ಜೊತೆಗೆ ಇಡೀ ಸಮಾಜಕ್ಕೆ ಒಂದು ಸಂದೇಶವಿದೆ" ಎಂದು ತಿಳಿಸಿದರು.
ಇನ್ನು ಈ ಸಿನಿಮಾದ ಕಥೆಯನ್ನು ದಿವಂಗತ ಪುನೀತ್ ರಾಜ್‍ಕುಮಾರ್ ಬದುಕಿರುವಾಗ ಕೇಳಿದ್ದರು. ಜೊತೆಗೆ ಸಿನಿಮಾ ಮಾಡಲು ಓಕೆ ಹೇಳಿದ್ದರು. ಇದೀಗ ಆ ಜವಾಬ್ದಾರಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ತೆಗೆದುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬಿಡುಗಡೆಗೂ ಬೇಕಾಗುವ ಎಲ್ಲಾ ರೀತಿಯ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಮೂಲಕ ಪತಿ ಪುನೀತ್ ಅವರ ಕನಸನ್ನು ನನಸು ಮಾಡಿದ್ದಾರೆ.
ಚಿತ್ರತಂಡ ಹೀಗಿದೆ..ಆಚಾರ್ & ಕೋ ಸಿನಿಮಾದಲ್ಲಿ ಹಿರಿಯ ನಟ ಅಶೋಕ್, ಸುಧಾ ಬೆಳವಾಡಿ, ಸಿಂಧು ಶ್ರೀನಿವಾಸಮೂರ್ತಿ ಹಾಗೂ ಸಾಕಷ್ಟು ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾದ ಮತ್ತೊಂದು ಹೆಮ್ಮೆಯ ವಿಚಾರವೆಂದರೆ, ಚಿತ್ರದ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು. ಸಿನಿಮಾಗೆ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಕ್ರಿಯಾಶೀಲ ನಿರ್ಮಾಪಕರು ಮತ್ತು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದು, ಈ ಮೂಲಕ ಅನೇಕ ಮಹಿಳಾ ಪ್ರತಿಭೆಗಳ ಸಂಗಮವಾಗಿದೆ.
ಇನ್ನೂ ಈ ಚಿತ್ರಕ್ಕೆ ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣವಿದೆ. ವಿಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಹೃದಯಸ್ಪರ್ಶಿ ಕಥೆಯನ್ನು ಜನರೆದುರು ತರುತ್ತಿದೆ.
ಇದನ್ನೂ ಓದಿ:Bombat Bhojana: ಸಾವಿರ ಕಂತುಗಳತ್ತ ಬೊಂಬಾಟ್ ಭೋಜನ; 'ಅಂಗೈಯಲ್ಲಿ ಆರೋಗ್ಯ' ಅಂತಿದ್ದಾರೆ ಸಿಹಿಕಹಿ ಚಂದ್ರು