ಕನ್ನಡ ಚಿತ್ರರಂಗದಲ್ಲಿ ಹೊಸ ಕಥೆ, ಹೊಸ ಪ್ರತಿಭೆಗಳನ್ನು ಗುರುತಿಸಿ ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ ಅಂದ್ರೆ ಅದು ''ಪಿ.ಆರ್.ಕೆ ಪ್ರೊಡಕ್ಷನ್ಸ್ ಹೌಸ್''. ಇದೀಗ ಮತ್ತೊಂದು ವಿಭಿನ್ನ ಕಥೆಯ ಚಿತ್ರವನ್ನು ಚಿತ್ರರಸಿಕರೆದುರು ತರಲು ಸಜ್ಜಾಗಿದೆ. ''ಆಚಾರ್ & ಕೋ'' ಸಿನಿಮಾ ಸಿನ್ಸ್ 1971 ಅನ್ನೋ ಟ್ಯಾಗ್ ಲೈನ್ ಹೊಂದಿದೆ.
ಆಚಾರ್ ಆ್ಯಂಡ್ ಕೋ ಸಿನಿಮಾದ ವಿಶೇಷತೆ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ, ಹಿರಿಯ ನಟ ಅಶೋಕ್, ಹಿರಿಯ ನಟಿ ಸುಧಾ ಬೆಳವಾಡಿ ಸೇರಿದಂತೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿರುವ ಸಿಂಧು ಶ್ರೀನಿವಾಸಮೂರ್ತಿ ಅವರು ಈ 'ಆಚಾರ್ & ಕೋ' ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾತು ಶುರು ಮಾಡಿದ ಅವರು, 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ. ಆಚಾರ್ ಎಂಬ ಸುಸಂಸ್ಕೃತ ಕುಟುಂಬದಲ್ಲಿ ಹತ್ತು ಮಕ್ಕಳು ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತಾರೆ, ಸಂಪ್ರದಾಯಗಳನ್ನೂ ಮೀರದೇ, ಆಧುನಿಕ ಜಗತ್ತಿನ ವಿಷಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹೇಳುವ ಒಂದು ಭಾವನಾತ್ಮಕ ಸಿನಿಮಾ. 60ರ ದಶಕದ ಅನುಭವ ಕೊಡಲು ಬಹುತೇಕ ಮೈಸೂರಿನಲ್ಲಿ ಲೈವ್ ಆಗಿ ಹಾಗೂ ಕೆಲ ದೃಶ್ಯಗಳಿಗೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಸೂಕ್ತ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70ರ ದಶಕದ ಬೆಂಗಳೂರನ್ನು ತೆರೆ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ. ಈ ಕುಟುಂಬದ ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೆ ತಿಳಿಯದಂತೆ ತಮ್ಮನ್ನು ಅಂದಿನ ಕಾಲಕ್ಕೆ ಹೋಗುತ್ತಾರೆ. 60ರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಹೇಗೆ ತಮ್ಮ ಜೀವನ ನಡೆಸಲು ಹೋರಾಟ ನಡೆಸುತ್ತಾರೆ ಅನ್ನೋದು ಆಚಾರ್ & ಕೋ ಚಿತ್ರಕಥೆ. ಈ ಚಿತ್ರದಲ್ಲಿ ಭಾವನಾತ್ಮಕ ವಿಷಯದಷ್ಟೇ ಹಾಸ್ಯವೂ ಇದೆ. ಆಸಕ್ತಿಕರ ಸನ್ನಿವೇಶಗಳ ಜೊತೆಗೆ ಇಡೀ ಸಮಾಜಕ್ಕೆ ಒಂದು ಪ್ರೇರಣೆಯೂ ಇದೆ ಎಂದು ತಿಳಿಸಿದರು.