ಬಹುಭಾಷಾ ತಾರೆ ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ ನಡುವಿನ ಸಂಬಂಧ ಈಗಾಗಲೇ ಅಧಿಕೃತಗೊಂಡಿದೆ. 'ಲಸ್ಟ್ ಸ್ಟೋರಿಸ್ 2' ವಿಚಾರಕ್ಕಾಗಿ ಈ ತಾರೆಯರು ಸುದ್ದಿಯಲ್ಲಿದ್ದಾರೆ. ಇವರಿಬ್ಬರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸುವ ಮೊದಲು ಅವರ ರಿಲೇಷನ್ಶಿಪ್ ಬಗ್ಗೆ ಕೆಲ ವದಂತಿಗಳಿದ್ದವು. ಈ ಮಧ್ಯೆ ವಿಜಯ್ ವರ್ಮಾ ಅವರು ತಮ್ಮ ಮದುವೆ ಆಲೋಚನೆ ಬಗ್ಗೆ, ಅದಕ್ಕಾಗಿ ಕುಟುಂಬದ ಒತ್ತಾಯದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಅವರನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಒತ್ತಡ ಹೇರುತ್ತಾರೆಯೇ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ವಿಜಯ್, "ನಾನು ಮಾರ್ವಾಡಿ. ನಮ್ಮ ಸಮುದಾಯದಲ್ಲಿ ಗಂಡು ಮಕ್ಕಳ ಮದುವೆ ವಯಸ್ಸು 16 ವರ್ಷ. ಹಾಗಾಗಿ ನನ್ನೊಂದಿಗೆ ಎಲ್ಲವೂ ಹಿಂದೆಯೇ ಪ್ರಾರಂಭವಾಗಬೇಕಿತ್ತು. ನಾನು ನಮ್ಮ ಸಂಪ್ರದಾಯದ ಪ್ರಕಾರ ಮದುವೆಯ ವಯಸ್ಸನ್ನು ಮೀರಿದ್ದೇನೆ. ಅದಲ್ಲದೇ, ನಾನು ಅಷ್ಟೊತ್ತಿಗಾಗಲೇ ನಟನಾದೆ" ಎಂದಿದ್ದಾರೆ.
"ನಾನು ಈ ಪ್ರಶ್ನೆಗಳ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ವೃತ್ತಿಜೀವನದ ಬಗ್ಗೆ ಮಾತ್ರ ಗಮನಹರಿಸಿದೆ. ಆದರೆ ಈಗಲೂ ನನ್ನ ತಾಯಿ ನನ್ನ ಮದುವೆಗೆ ಒತ್ತಾಯಿಸುತ್ತಾರೆ. ಅವರು ಇನ್ನೂ ಪ್ರತಿ ಫೋನ್ ಕರೆಯಲ್ಲಿ ಮದುವೆಯ ಬಗ್ಗೆ ಕೇಳುತ್ತಾರೆ. ಆದರೆ ನಾನು ಅದಕ್ಕೆ ಉತ್ತರ ಕೊಡದೇ ತಪ್ಪಿಸಿಕೊಳ್ಳುತ್ತೇನೆ. ನಾನು ನನ್ನ ಜೀವನದಲ್ಲಿನ್ನೂ ಬೆಳೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.
ಇನ್ನು ತಮನ್ನಾ ಮತ್ತು ವಿಜಯ್ ನಡುವಿನ ಪ್ರೀತಿ ಸುಜಯ್ ಘೋಷ್ ನಿರ್ದೇಶನದ 'ಲಸ್ಟ್ ಸ್ಟೋರಿಸ್ 2' ಸೆಟ್ನಲ್ಲಿ ಹುಟ್ಟಿಕೊಂಡಿತು. ಗೋವಾದಲ್ಲಿ ನಡೆದ ನ್ಯೂ ಇಯರ್ ಪಾರ್ಟಿಯಲ್ಲಿ ಪರಸ್ಪರ ಚುಂಬನದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವವರೆಗೆ ಈ ಜೋಡಿ ತಮ್ಮ ವಿಚಾರವನ್ನು ಮರೆಮಾಚಿದ್ದರು. ಈ ಚಿತ್ರ ಬಹಿರಂಗಗೊಂಡ ಬಳಿಕ ಇವರಿಬ್ಬರ ನಡುವಿನ ಸಂಬಂಧದ ಕುರಿತು ಹಲವು ಊಹಾಪೋಹಗಳು ಎದ್ದವು. ಇವರಿಬ್ಬರ ಆತ್ಮೀಯ ದೃಶ್ಯಗಳು ತೆರೆ ಮೇಲೆ ಮೋಡಿ ಮಾಡಿದವು. ನಂತರದಲ್ಲಿ ಈ ಜೋಡಿ ಸಿನಿಮಾ ಮತ್ತು ಡಿನ್ನರ್ ಡೇಟ್ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಮತ್ತೊಂದು ಮುಖ್ಯ ವಿಚಾರವೆಂದರೆ, ನಟಿ ತಮನ್ನಾ ತಮ್ಮ 17 ವರ್ಷದ ಸಿನಿ ಜೀವನದಲ್ಲಿ ನೋ ಕಿಸ್ಸಿಂಗ್ ಪಾಲಿಸಿಯನ್ನು ಅಂದರೆ, ತೆರೆ ಮೇಲೆ ನಟರಿಗೆ ಮುತ್ತಿಕ್ಕುವ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದರು. ಆದರೆ, ಲಸ್ಟ್ ಸ್ಟೋರಿಸ್ನಲ್ಲಿ ಅವರು ತಮ್ಮ ಈ ನಿಯಮವನ್ನು ಮುರಿದಿದ್ದು, ತೆರೆ ಮೇಲೆ ಮೊದಲ ಬಾರಿಗೆ ನಟ ವಿಜಯ್ ಅವರಿಗೆ ಮುತ್ತಿಕ್ಕಿದ್ದರು.
ಮಿಜೊರಾಂ ಮೂಲದ ನಟ ವಿಜಯ್ ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂಬರುವ ಸಿನಿಮಾದ ಬಗ್ಗೆ ನೋಡುವುದಾದರೆ, ಕಾಲ್‌ಕೂಟ ವೆಬ್ಸರಣಿ ಬಿಡುಗಡೆಗೆ ಸಜ್ಜಾಗಿದೆ. ತಮನ್ನಾ ಅವರು ಕೊನೆಯದಾಗಿ ಲಸ್ಟ್ ಸ್ಟೋರೀಸ್ 2 ಮತ್ತು ಜೀ ಕರ್ದಾ ಸೀರಿಸ್ನಲ್ಲಿ ಕೆಲಸ ಮಾಡಿದ್ದರು. ಸದ್ಯ ಅವರು ತೆಲುಗಿನ ಭೋಲಾ ಶಂಕರ್ ಮತ್ತು ರಜನಿಕಾಂತ್ ಅವರ ಜೈಲರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ, ನಿಖಿಲ್ ಅಡ್ವಾಣಿ ನಿರ್ದೇಶನದ ವೇದಾ (Vedaa) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೈ ಆ್ಯಕ್ಷನ್ ಡ್ರಾಮಾ 'ವೇದಾ' ಇತ್ತೀಚೆಗೆ ರಾಜಸ್ಥಾನದಲ್ಲಿ ಚಿತ್ರೀಕರಣ ಪ್ರಾರಂಭಿಸಿದೆ.
ಇದನ್ನೂ ಓದಿ:'ಮದುವೆಯೆಂಬುದು ಪಾರ್ಟಿಯಲ್ಲ, ಅದು ಹೆಚ್ಚಿನ ಜವಾಬ್ದಾರಿ'; ಹೀಗೆ ಹೇಳಿದ್ದೇಕೆ ತಮನ್ನಾ!?