ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಸೈಯಾಮಿ ಖೇರ್ ಮುಖ್ಯಭೂಮಿಕೆಯ 'ಘೂಮರ್' ಸಿನಿಮಾ ಆಗಸ್ಟ್ 18ರಂದು ಬಿಡುಗಡೆಯಾಗಿದ್ದು, ಸಾಧಾರಣ ಪ್ರತಿಕ್ರಿಯೆ ಸ್ವೀಕರಿಸಿದೆ. ಸ್ಫೂರ್ತಿದಾಯಕ ಕ್ರೀಡಾ ಸಿನಿಮಾದಲ್ಲಿ ಜೂನಿಯರ್ ಬಚ್ಚನ್ ತರಬೇತಿದಾರನ ಪಾತ್ರದಲ್ಲಿ ಕಾಣಿಸಿಕೊಂಡರೆ, ಬಚ್ಚನ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ತರಬೇತಿ ಪಡೆಯುವ ಪಾತ್ರದಲ್ಲಿ ಸೈಯಾಮಿ ಖೇರ್ ನಟಿಸಿದ್ದಾರೆ. ಆರ್. ಬಾಲ್ಕಿ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆಯಾದರೂ, ಬಾಲಿವುಡ್ ಬಾಕ್ಸ್ ಆಫೀಸ್ ಪೈಪೋಟಿ ಹಿನ್ನೆಲೆಯಲ್ಲಿ 'ಘೂಮರ್' ಕಲೆಕ್ಷನ್ ಸಂಖ್ಯೆ ಕಡಿಮೆ ಇದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಕೊಂಚ ಹಿನ್ನಡೆ ಎದುರಿಸಿದೆ.
ಘೂಮರ್ ಕಲೆಕ್ಷನ್:'ಘೂಮರ್' ಸಿನಿಮಾ ತೆರೆಕಂಡ ಮೊದಲ ದಿನ ಕೇವಲ 85 ಲಕ್ಷ ರೂ. ಗಳಿಸಿತು. ಎರಡನೇ ದಿನ ಶನಿವಾರದಂದು 1.2 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಘೂಮರ್ ಸಿನಿಮಾದ ಎರಡು ದಿನದ ಒಟ್ಟು ಕಲೆಕ್ಷನ್ 2 ಕೋಡಿ ರೂ. ಆಗಿದೆ. ಚಿತ್ರ 29.97 ಆಕ್ಯುಪೆನ್ಸಿ ದರ ಹೊಂದಿದೆ.
ಹಿರಿಯ ನಟ ಅಮಿತಾಭ್ ಬಚ್ಚನ್ ಪುತ್ರನಾಗಿದ್ದರೂ ಸದ್ಯ ಸಿನಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆಗೈದಿಲ್ಲ. ಅಪರೂಪಕ್ಕೊಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. 2018ರಲ್ಲಿ ಬಂದ ಮನ್ಮರ್ಜಿಯಾನ್ ನಟನ ಕೊನೆಯ ಸಿನಿಮಾ. ಬಿಗ್ ಬಿ ಪುತ್ರನಿಗೆ ದೊಡ್ಡ ಮಟ್ಟದ ಯಶಸ್ಸಿನ ಅಗತ್ಯವಿದೆ. ಆದ್ರೆ ಸದ್ಯ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಅಭಿಷೇಕ್ ಬಚ್ಚನ್ ಅವರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ.
ಬಾಕ್ಸ್ ಆಫೀಸ್ ಪೈಪೋಟಿ:ಆಗಸ್ಟ್ 11ರಂದು ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳಾದ ಗದರ್ 2 ಮತ್ತು ಓ ಮೈ ಗಾಡ್ 2 ಸಿನಿಮಾ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿವೆ. ಗದರ್ 2 ಕಲೆಕ್ಷನ್ ಸಂಖ್ಯೆಯಂತೂ ಎಲ್ಲರ ಹುಬ್ಬೇರಿಸುವಂತಿದೆ. ಇತ್ತ ಓಎಂಜಿ ಸೀಕ್ವೆಲ್ ಸಹ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ಪೈಪೋಟಿ, ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್ಸ್ ಈ ಘೂಮರ್ ಚಿತ್ರದ ಮೇಲೆ ಪರಿಣಾಮ ಬೀರಿದೆ.