ಸಿನಿಮಾ ಎಂಬ ಕಲರ್ಫುಲ್ ದುನಿಯಾದಲ್ಲಿ ಬೆಳಗಬೇಕಾದರೆ ಪ್ರತಿಭೆ, ಶ್ರಮದೊಂದಿಗೆ ಅದೃಷ್ಟವೂ ಇರಬೇಕು ಎಂಬ ಮಾತಿದೆ. ಇದು ಕೆಲವೊಮ್ಮೆ ನಿಜ ಕೂಡಾ. ನಟ ಅಭಿಷೇಕ್ ಅಂಬರೀಶ್ ವಿಷಯವನ್ನು ಇಲ್ಲಿ ಉದಾಹರಿಸಬಹುದು. 'ಅಮರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಭಿಷೇಕ್ ಅಂಬರೀಶ್ ಅವರಿಗೆ ಚೊಚ್ಚಲ ಚಿತ್ರ ದೊಡ್ಡ ಮಟ್ಟಿನ ಹೆಸರು ತಂದುಕೊಡಲಿಲ್ಲ.
ಇದಾದ ನಂತರದಲ್ಲಿ 'ಬ್ಯಾಡ್ ಮ್ಯಾನರ್ಸ್' ಮೂಲಕ ಜೂನಿಯರ್ ಅಂಬರೀಶ್ ಕನ್ನಡ ಸಿನಿಪ್ರಿಯರ ಮನ ಗೆಲ್ಲುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ದುನಿಯಾ ಸೂರಿ ನಿರ್ದೇಶನದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರ ಎಫೆಕ್ಟ್ ಅಭಿಷೇಕ್ ನಟನೆಯ ಮೂರನೇ ಸಿನಿಮಾದ ಮೇಲಾಗಿದೆ ಎಂದು ಹೇಳಲಾಗುತ್ತಿದೆ.
ಅಭಿಷೇಕ್ ಅಂಬರೀಶ್ ಅಭಿನಯದ ಮೂರನೇ ಚಿತ್ರ 'ಕಾಳಿ' ಕೆಲಸ ನಿಂತು ಹೋಗಿರುವ ಸುದ್ದಿ ಬಂದಿದೆ. ಕಳೆದ ವರ್ಷ 'ಕಾಳಿ' ಅನೌನ್ಸ್ ಆಗಿತ್ತು. ಪೈಲ್ವಾನ್ ನಿರ್ದೇಶಕ ಎಸ್.ಕೃಷ್ಣ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದ ಚಿತ್ರವಿದು. 2022ರ ನವೆಂಬರ್ನಲ್ಲಿ ಮುಹೂರ್ತ ಕಾರ್ಯಕ್ರಮವು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತ್ತು. 2023ರ ಮೇನಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದೇ ಹೇಳಲಾಗಿತ್ತು.
ಆದರೆ 'ಬ್ಯಾಡ್ ಬ್ಯಾನರ್ಸ್' ಕೆಲಸಗಳು ಆ ಹೊತ್ತಿಗೆ ಪೂರ್ಣಗೊಂಡಿರಲಿಲ್ಲ. ಅಲ್ಲದೇ, ಜೂನ್‍ನಲ್ಲಿ ಅಭಿಷೇಕ್ ಮದುವೆ ನಿಗದಿಯಾಗಿದ್ದ ಕಾರಣ, 'ಕಾಳಿ' ಚಿತ್ರವನ್ನು ಮುಂದೂಡಲಾಯಿತು. ಆದಾಗ್ಯೂ, 'ಬ್ಯಾಡ್ ಮ್ಯಾನರ್ಸ್' ಬಿಡುಗಡೆಯಾದರೂ ಕಾಳಿ ಸೂಚನೆಯೇ ಇಲ್ಲ. ಮೂಲಗಳ ಪ್ರಕಾರ, 'ಕಾಳಿ' ಚಿತ್ರವನ್ನು ಕೃಷ್ಣ ಕೈಬಿಟ್ಟಿದ್ದಾರಂತೆ.