'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಔಟ್: ಅಭಿಷೇಕ್ ಅಂಬರೀಶ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕನ್ನಡ ಚಿತ್ರರಂಗದಲ್ಲಿ ಟೈಟಲ್ನಿಂದಲೇ ಟಾಕ್ ಆಗುತ್ತಿರುವ ಚಿತ್ರ 'ಬ್ಯಾಡ್ ಮ್ಯಾನರ್ಸ್'. ಸುಕ್ಕಾ ಸೂರಿ ನಿರ್ದೇಶನ ಮತ್ತು ಜೂನಿಯರ್ ಯಂಗ್ ರೆಬಲ್ ಅಭಿಷೇಕ್ ಅಂಬರೀಶ್ ಕಾಂಬೋದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪ್ರಚಾರದಲ್ಲಿ ನಿರತವಾಗಿರುವ ಚಿತ್ರತಂಡ ಇದೀಗ ಟ್ರೇಲರ್ ಬಿಡುಗಡೆಗೊಳಿಸಿದೆ.
'ಬ್ಯಾಡ್ ಮ್ಯಾನರ್ಸ್' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ನಲ್ಲಿ ನಡೆಯಿತು. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಸುಮಲತಾ ಅಂಬರೀಶ್, ನಟ ಧ್ವನೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ವಿನೋದ್ ಪ್ರಭಾಕರ್ , ಅಭಿಷೇಕ್ ಅಂಬರೀಶ್ ಹಾಗೂ ನಿರ್ದೇಶಕ ದುನಿಯ ಸೂರಿ ಸೇರಿದಂತೆ ಇಡೀ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ಉಪಸ್ಥಿತರಿದ್ದರು.
ರೆಬಲ್ ಸ್ಟಾರ್ ಅಂಬರೀಶ್ ಅವರ ದೊಡ್ಡ ಮಗನೆಂದೇ ಕರೆಸಿಕೊಂಡಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೀಗ ಅಭಿಷೇಕ್ ಅಂಬರೀಶ್ ಸಿನಿಮಾಗೆ ಅವರು ಬೆಂಬಲವಾಗಿ ನಿಂತಿದ್ದಾರೆ. ಮೊದಲನೇ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಎರಡನೇ ಸಿನಿಮಾದಲ್ಲಿ ಚಿತ್ರತಂಡಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಇದೀಗ 'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಅನ್ನು ದರ್ಶನ್ ಬಿಡುಗಡೆಗೊಳಿಸಿದ್ದಾರೆ. ಜೊತೆಗೆ ಅಭಿಷೇಕ್ ಅಂಬರೀಶ್ ಬಗ್ಗೆ ಕೆಲ ಇಂಟ್ರಸ್ಟಿಂಗ್ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
"ನೀವು ಬರೀ ಟ್ರೈಲರ್ ನೋಡಿದ್ದೀರಲ್ವ. ನಾವು ಸಿನಿಮಾವನ್ನೇ ನೋಡಿದ್ದೇವೆ. ಸೂರಿಯವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಯಾಕಂದ್ರೆ, ಅವರ ಸಿನಿಮಾದ ಪ್ಯಾಟ್ರನ್ ಬೇರೆನೇ ಇರುತ್ತೆ. ಇವತ್ತಿನ ಪೀಳಿಗೆ ಏನೇನಾಗ್ತಿದೆಯೋ ಆ ತರಹದ ಒಂದು ಸಿನಿಮಾ. ಈ ಸಿನಿಮಾದಲ್ಲಿ ನೀವು ಹೆಚ್ಚು ಗನ್‌ಗಳನ್ನೇ ನೋಡುತ್ತೀರ. ಅಂದ್ರೆ ಸೂರಿಯರು ಹೇಳೋಕೆ ಹೊರಟಿರೋದು ಏನಂದ್ರೆ, ಇದು ಗನ್ ಕಣಪ್ಪ.. ಬನ್ ಅಲ್ಲ ಅಂತ" ಎಂದು ಸಿನಿಮಾ ಬಗ್ಗೆ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದರು.
"ಇಲ್ಲಿವರೆಗೂ ನೀವು ಅಭಿಷೇಕ್ ಅವರನ್ನು ಯಂಗ್ ರೆಬೆಲ್ ಸ್ಟಾರ್ ಅಂತಿದ್ರಿ. ಇನ್ನು ಮುಂದೆ ನೀವು ರಿಯಲ್ ರೆಬೆಲ್ ಸ್ಟಾರ್ ಅನ್ನೇ ನೋಡ್ತೀರಾ. ಯಾಕಂದ್ರೆ, ಮೊದಲನೇ ಸಿನಿಮಾಗೂ ಈ ಸಿನಿಮಾಗೂ ಅಭಿಷೇಕ್ ಅವರು ತುಂಬಾನೇ ಬದಲಾಗಿದ್ದಾರೆ. ಅವರ ಆಕ್ಟಿಂಗ್ ಸ್ಕಿಲ್ ಬದಲಾಗಿದೆ. ಅವರ ಸ್ಟೈಲ್ ಬದಲಾಗಿದೆ. ಅದೆಲ್ಲದ್ದಕ್ಕೂ ಕಾರಣ ಸೂರಿಯವರು. ಯಾಕಂದ್ರೆ ಅಷ್ಟು ಚೆನ್ನಾಗಿ ನಮ್ಮ ಹುಡುಗನ ಹತ್ತಿರ ಕೆಲಸ ತೆಗೊಂಡಿದ್ದಾರೆ" ಎಂದು ನಿರ್ದೇಶಕ ಸೂರಿ ಸಿನಿಮಾ ಶೈಲಿಯನ್ನು ಹೊಗಳಿದರು.
ಇದನ್ನೂ ಓದಿ:'ಸಿಲ ನೋಡಿಗಳಿಲ್' ತಮಿಳು ಚಿತ್ರಕ್ಕೆ ಪ್ರೊಡ್ಯೂಸರ್ ಆದ ನಟಿ ಶರ್ಮಿಳಾ ಮಾಂಡ್ರೆ
"ನಮ್ಮನ್ನು ನೋಡಿದಾಗ ಎಲ್ಲರೂ ಹೈಟ್ ಹೈಟ್ ಅನ್ನೋರು. ಈಗ ಯಾರು ಹೈಟಿದ್ದಾರೆ ನೋಡಿ ಸ್ವಾಮಿ. ಇವರ ಮುಂದೆ ನಾವೇ ಕುಳ್ಳಗೆ ಕಾಣ್ತೀವಿ ಅಲ್ವಾ? ನನಗಿಂತ ಎರಡು ಇಂಚು ಉದ್ದ ಜಾಸ್ತಿ ಇದ್ದಾನೆ. ವಿಕ್ಕಿನೂ ನಮಗಿಂತಲೂ ಉದ್ದ ಇದ್ದಾನೆ. ಧನ್ವೀರ್, ವಿನೋದ್ ಪ್ರಭಾಕರ್, ಎಲ್ಲರೂ ಹೈಟ್ ಇದ್ದಾರೆ. ಮುಂದೆ ಬರ್ತಿರೋ ಎಲ್ಲಾ ಯಂಗ್‌ಸ್ಟರ್‌ಗಳಿಗೂ ಒಳ್ಳೆಯದಾಗಲಿ. ಬ್ಯಾಡ್ ಮ್ಯಾನರ್ಸ್ ಬರೀ ಹೆಸರಷ್ಟೇ. ಒಳ್ಳೆ ಮ್ಯಾನರ್ಸ್ ಇಟ್ಟುಕೊಂಡು ಮಾಡಿದಂತಹ ಸಿನಿಮಾವಿದು" ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.
ಟಗರು ಸಿನಿಮಾ ಬಳಿಕ ನಿರ್ದೇಶಕ ಸೂರಿ, ಅಭಿಷೇಕ್ ಅಂಬರೀಶ್ಗಾಗಿ ನಿರ್ದೇಶನ ಮಾಡಿರೋ ಚಿತ್ರವೇ 'ಬ್ಯಾಡ್ ಮ್ಯಾನರ್ಸ್'. ಅಮರ್ ಸಿನಿಮಾ ನಂತರ, ಜೂನಿಯರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ. ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಖಾಕಿ ತೊಟ್ಟು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ನಲ್ಲಿ ತೋರಿಸಲಾಗಿರುವ ರೌಡಿಸಂ, ರಕ್ತಸಿಕ್ತ ದೃಶ್ಯಗಳು, ಗಾಂಜಾ ಸುತ್ತ ನಡೆಯುವ ಭಯ ಹುಟ್ಟಿಸುವ ಚೇಸಿಂಗ್ ಸನ್ನಿವೇಶಗಳು ರೋಚಕವಾಗಿದೆ.
ಚಿತ್ರವನ್ನು ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ ಭಾಗದಲ್ಲಿ ಹೆಚ್ಚಾಗಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಬ್ಯಾಡ್ ಮ್ಯಾನರ್ಸ್ ಚಿತ್ರದ ಹಾಡುಗಳು ಹಿಟ್ ಆಗಿವೆ. ಈಗಾಗಲೇ ಈ ಚಿತ್ರದ ಟೈಟಲ್ ಟ್ರಾಕ್ ಬರೋಬ್ಬರಿ 5 ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಹಾಡಿನಲ್ಲಿ ಅಭಿಷೇಕ್ ಅಂಬರೀಶ್ ಜೂನಿಯರ್ ರೆಬೆಲ್ ಆಗಿ ಮಿಂಚಿದ್ದಾರೆ.
ನಿರ್ದೇಶಕ ಸೂರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್'ನಲ್ಲಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟಿ ತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಪೆಟ್ರೋಮ್ಯಾಕ್ಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಕೆ.ಎಂ. ಸುಧೀರ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಮಾಸ್ತಿ ಮಂಜು ಸಂಭಾಷಣೆ, ಚರಣ್ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದೇ ನವೆಂಬರ್ 24ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ:ಅನೀಶ್ ತೇಜೇಶ್ವರ್ ನಟನೆಯ 'ಮಾಯಾನಗರಿ' ಚಿತ್ರದ ಟ್ರೇಲರ್ ಬಿಡುಗಡೆ