ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಕೈ ಹಿಡಿದು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಜೂನ್ 5 ರಂದು ಮದುವೆ ಶಾಸ್ತ್ರಗಳು ನಡೆದಿದ್ದರೆ, ಜೂನ್ 7 ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವು ನೆರವೇರಿದೆ. ಬಳಿಕ ನಿನ್ನೆ (ಜೂನ್ 10) ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸಂಗೀತ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು. ಸಂಗೀತ ಕಾರ್ಯಕ್ರಮವನ್ನು ಅವಿವಾ ಬಿದ್ದಪ್ಪ ತಂದೆ ಪ್ರಸಾದ್ ಬಿದ್ದಪ್ಪ ಆಯೋಜಿಸಿದ್ದರು.
ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕನಸಿನ ರಾಣಿ ಮಾಲಾಶ್ರೀ, ಗುರುಕಿರಣ್, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್, ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ, ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ, ಮಂಚು ಮನೋಜ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಅನೇಕ ಭಾರತೀಯ ಚಿತ್ರರಂಗದ ತಾರೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಸುಮಲತಾ ಜೊತೆ 'ಜೋಡೆತ್ತು'ಗಳ ಡ್ಯಾನ್ಸ್: ಸಂಗೀತ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿ ಬಾಸ್ ದರ್ಶನ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಸುಮಲತಾ ಮತ್ತು ನವ ಜೋಡಿಯನ್ನು ಸೇರಿಸಿಕೊಂಡು ವಿಜಯ್ ಪ್ರಕಾಶ್ ಅವರ ಹಿಟ್ ಸಾಂಗ್ ‘ಜಲೀಲ’ಕ್ಕೆ ಸ್ಟೆಪ್ ಹಾಕಿದ್ದಾರೆ. ಐವರು ಕೈ ಕೈ ಹಿಡಿದುಕೊಂಡು ಸ್ಟೆಜ್ನಲ್ಲಿ ಕುಣಿದಿದ್ದು, ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಫ್ಯಾನ್ಸ್ ಲೈಕ್ಸ್ ಮತ್ತು ಕಮೆಂಟ್ಗಳ ಜೊತೆಗೆ ಈ ವಿಡಿಯೋವನ್ನು ಫುಲ್ ಶೇರ್ ಮಾಡುತ್ತಿದ್ದಾರೆ. ಸದ್ಯ ಇಂಟರ್ನೆಟ್ನಲ್ಲಿ ಈ ವಿಡಿಯೋಗಳೇ ಟ್ರೆಂಡಿಂಗ್ನಲ್ಲಿದೆ.
ಅವಿವಾಗೆ ಕೈ ಮುಗಿದ ದರ್ಶನ್:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವಿವಾ ಜೊತೆಗೆ ಅಣ್ಣನ ಸ್ಥಾನದಲ್ಲಿ ನಿಂತು ಕೆಲ ಮಾತುಗಳನ್ನಾಡಿದ್ದಾರೆ. "ರೆಬಲ್ ಅನ್ನೋ ಹೆಸರನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅಂತಹ ಮಹಾನ್ ವ್ಯಕ್ತಿಯ ಮನೆಗೆ ನೀನು ಮಹಾಲಕ್ಷ್ಮೀಯಾಗಿ ಬಂದಿದ್ದೀಯ. ಆ ಮನೆಯ ಗೌರವವನ್ನು ಕಾಪಾಡುವ ಹೊಣೆ ನಿನಗಿದೆ. ಅಭಿಷೇಕ್ ಏನಾದರೂ ತೊಂದರೆ ಕೊಟ್ಟರೆ ನನ್ನಲ್ಲಿ ಹೇಳು. ಅವನನ್ನು ನಾನು ನೋಡಿಕೊಳ್ಳುತ್ತೇನೆ. ನಿನಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅಂಬರೀಶ್ ಅನ್ನೋ ಹೆಸರಿಗೆ ಯಾವತ್ತೂ ದಕ್ಕೆ ತರಬೇಡ" ಎಂದು ಮಂಡಿಯೂರಿ ಅವಿವಾ ಎದುರು ಕೇಳಿಕೊಂಡಿದ್ದಾರೆ.
ದರ್ಶನ್ ಮಾತು ಮುಗಿಯುತ್ತಿದ್ದಂತೆ ಮೈಕ್ ಕೈಯಲ್ಲಿ ಹಿಡಿದ ಯಶ್, ಅಭಿಷೇಕ್ಗೆ ವಾರ್ನಿಂಗ್ ಕೊಡುವಂತೆ ತಮಾಷೆಯಾಗಿ ಮಾತನಾಡಿದ್ದಾರೆ. "ನಮ್ಮ ಮನೆಗೆ ಮಹಾಲಕ್ಷ್ಮೀ ಬಂದಿದ್ದಾಳೆ. ನೋಡಮ್ಮ ಅವಿವಾ ನೀನೇನೇ ಮಾಡಿದ್ರು ಅದ್ರಲ್ಲಿ ನಿನ್ನ ತಪ್ಪಿಲ್ಲ. ಅಭಿಷೇಕ್ದ್ದೇ ತಪ್ಪು. ಅದು ನಮ್ ಗ್ಯಾರಂಟಿ. ನೀನು ಎಲ್ಲೇ ಹೋದ್ರೂ ಮನೆಗೆ ಬರಬೇಕು ಅಭಿ" ಅಂತಾ ಯಶ್ ಅವ್ರು ಅಭಿಷೇಕ್ ಜೊತೆ ಕಾಮಿಡಿಯಾಗಿ ವಾರ್ನಿಂಗ್ ನೀಡಿದ್ದಾರೆ. ದರ್ಶನ್ ಮತ್ತು ಯಶ್ ಅವರ ಈ ಸಂಭಾಷಣೆ ಅಲ್ಲಿ ಸೇರಿದ್ದವರನ್ನೆಲ್ಲಾ ನಗೆಗಡಲಿನಲ್ಲಿ ತೇಲಿಸಿತ್ತು.
'ಅಣ್ತಮ್ಮಾ' ಹಾಡಿಗೆ ಮಾಲಾಶ್ರೀ ಸಖತ್ ಸ್ಟೆಪ್:ಯಶ್ ಸಿನಿಮಾದ ಅಣ್ತಮ್ಮಾ ಹಾಡಿಗೆ ಮಾಲಾಶ್ರೀ ಸಖತ್ ಸ್ಟೆಪ್ ಹಾಕಿದ್ದಾರೆ. ಯಶ್, ದರ್ಶನ್, ಅಭಿಷೇಕ್, ಅವಿವಾ ಮತ್ತು ಸುಮಲತಾ ಜೊತೆ ಸೇರಿ ಕುಣಿದು ಎಂಜಾಯ್ ಮಾಡಿದ್ದಾರೆ. ಜೊತೆಗೆ ಅವರೊಂದಿಗೆ ಉಳಿದ ಸೆಲೆಬ್ರಿಟಿಗಳು ಕೂಡ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ:Tiger Prabhakar Family: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟೈಗರ್ ಪ್ರಭಾಕರ್ ಮಕ್ಕಳು: ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅಣ್ಣ-ತಂಗಿ