ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳೇ ಹೆಚ್ಚು ಬರುತ್ತಿದೆ. ಪ್ರೇಕ್ಷಕರಿಗೆ ಹೊಸ ಮುಖಗಳ ಪರಿಚಯವಾಗುತ್ತಿದೆ. ಒಂದೊಳ್ಳೆ ಕಂಟೆಂಟ್ ಜೊತೆ ಬರುವ ಈ ಸಿನಿಮಾಗಳು ನೋಡುಗರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ತೆರೆ ಕಂಡ ಹೊಸಬರ 'ಅಭಿರಾಮಚಂದ್ರ' ಚಿತ್ರಕ್ಕೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅಕ್ಟೋಬರ್ 6ರಂದು ರಾಜ್ಯಾದ್ಯಂತ ಬಿಡುಗಡೆಯಾದ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದ್ದು, ಇಡೀ ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿದೆ.
ಚಿತ್ರದಲ್ಲಿ ರಥ ಕಿರಣ್, ಸಿದ್ದು ಮೂಲಿಮನಿ, ವತ್ತು ನಾಟ್ಯರಂಗ, ಶಿವಾನಿ ರೈ ಮುಖ್ಯಭೂಮಿಕೆಯಲ್ಲಿದ್ದಾರೆ. ಕರಾವಳಿ ಭಾಗದ ಕಲಾ ಪ್ರೇಮಿಗಳ ಸಹಕಾರದೊಂದಿಗೆ 'ಅಭಿರಾಮಚಂದ್ರ' ಸಿನಿಮಾದ ಸಪ್ತೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಏಳು ದಿನ ನಡೆಯುವ ಈ ಉತ್ಸವದಲ್ಲಿ ದೀಪ ಬೆಳಗಿಸುವ ಮೂಲಕ ಪ್ರೇಕ್ಷಕರು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಈಗಾಗಲೇ ಮೂರು ದಿನಗಳು ಕಳೆದಿದ್ದು, 'ಅಭಿರಾಮಚಂದ್ರ' ಸಪ್ತೋತ್ಸವಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸಿನಿರಸಿಕರು ಚಿತ್ರ ಮೆಚ್ಚಿಕೊಂಡಿದ್ದಾರೆ.
ವಸ್ತು, ಪ್ರೀತಿ ಇರಲಿ, ಎಮೋಷನ್ ಅಥವಾ ಆಕ್ಷನ್ ಇರಲಿ ಆ ವಸ್ತುವನ್ನು ಗಟ್ಟಿಯಾಗಿ ಹಿಡಿದು ಅದರ ಸುತ್ತ ಮುತ್ತ ಒಂದಿಷ್ಟು ಕಲರ್ಫುಲ್ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರ ಬಳಿ ತೆಗೆದುಕೊಂಡು ಹೋಗಿ ಯಶಸ್ವಿಯಾಗುವುದು ಸುಲಭವಲ್ಲ. ಈ ಪ್ರಯತ್ನದಲ್ಲಿ ನಿರ್ದೇಶಕ ನಾಗೇಂದ್ರ ಗಾಣಿಗ ಯಶಸ್ವಿಯಾಗಿದ್ದಾರೆ. ಇದು ಅವರು ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಇವರು ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.