ಮುಂಬೈ: ಅಂತಾರಾಷ್ಟ್ರೀಯ ಎಮ್ಮಿ-ನಾಮನಿರ್ದೇಶಿತ ವೆಬ್ ಸಿರೀಸ್ ಆರ್ಯ ತಯಾರಕರು ಇಂದು ಸೀಸನ್ 3 ಯ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಸುಶ್ಮಿತಾ ಸೇನ್ ಅವರು ಟೈಟಲ್ ರೋಲ್ನಲ್ಲಿ, ನಾಯಕಿಯಾಗಿ ಕಾಣಿಸಿಕೊಂಡಿರುವ 'ಆರ್ಯ' ವೆಬ್ ಸಿರೀಸ್ ಮೂರನೇ ಸೀಸನ್ನ ಟೀಸರ್ ಅನ್ನು ಇಂದು ತಂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.
ಆರ್ಯ 3 ಟೀಸರ್ನಲ್ಲಿ ಸುಶ್ಮಿತಾ ಸೇನ್ ಸಿಗರೇಟ್ ಸೇದುತ್ತಾ ಗನ್ ಲೋಡ್ ಮಾಡುತ್ತಿರುವ ಒರಿಜಿನಲ್ ಗ್ಯಾಂಗ್ಸ್ಟರ್ ಲುಕ್ನಲ್ಲಿ ಸಖತ್ ಇಂಪ್ರೆಸ್ಸಿವ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್ಯ ವೆಬ್ ಸಿರೀಸ್ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುವ ಸ್ವತಂತ್ರ ಮಹಿಳೆಯಾಗಿ ಸುಶ್ಮಿತಾ ಸೇನ್ ಅಭಿನಯಿಸಿದ್ದಾರೆ. ತನ್ನ ಗಂಡನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮಾಫಿಯಾ ಗ್ಯಾಂಗ್ಗೆ ಸೇರಿಕೊಳ್ಳುವ ದಿಟ್ಟ ಮಹಿಳೆಯ ಕಥೆ ಇದಾಗಿದೆ.
ಡಿಸ್ನಿ ಹಾಟ್ಸ್ಟಾರ್ ಇನ್ಸ್ಟಾಗ್ರಾಂ ಅಧಿಕೃತ ಪೇಜ್ನಲ್ಲಿ ಟೀಸರ್ ಅನ್ನು ಹಂಚಿಕೊಂಡಿದ್ದು, 'ಅವಳು ಹಿಂತಿರುಗಿದ್ದಾಳೆ, ಅವಳೆಂದರೆ ಬ್ಯುಸಿನೆಸ್, ಹಾಟ್ಸ್ಟಾರ್ ಸ್ಪೆಷಲ್ ಆರ್ಯ 3ನೇ ಸೀಸನ್ ಈಗ ಶೂಟಿಂಗ್ ಹಂತದಲ್ಲಿದೆ. ಶೀಘ್ರದಲ್ಲೇ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಮಾತ್ರವೇ ತೆರೆಗೆ ಬರಲಿದೆ' ಎಂದು ಮಾಹಿತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಎಮ್ಮಿ-ನಾಮನಿರ್ದೇಶಿತ ಸರಣಿಯ ಮೂರನೇ ಸೀಸನ್ ಶೂಟಿಂಗ್ನಲ್ಲಿ ಭಾಗವಹಿಸುತ್ತಿರುವುದು ಬಹಳ ಥ್ರಿಲ್ಲಿಂಗ್ ಆಗಿದೆ. ಈ ಸಿರೀಸ್ ನನಗೆ ಮನೆಯ ವಾತಾವರಣವನ್ನೇ ಕೊಡುತ್ತದೆ. ಅಷ್ಟೇ ಅಲ್ಲ, ನನ್ನೊಳಗೆ ಸಬಲೀಕರಣದ ಭಾವವನ್ನು ಹೆಚ್ಚಿಸುತ್ತದೆ ಎಂದು ಲೇಡಿ ಸೂಪರ್ಸ್ಟಾರ್ ಸುಶ್ಮಿತಾ ಸೇನ್ ಆರ್ಯ ಟೀಸರ್ ಬಿಡುಗಡೆ ಬಗ್ಗೆ ಹೇಳಿದ್ದಾರೆ.
ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪ್ರಸ್ತುತಪಡಿಸುತ್ತಿರುವ ಹಾಗೂ ರಾಮ್ ಮಾಧ್ವನಿ ಮತ್ತು ಸಂದೀಪ್ ಮೋದಿ ಅವರ ತಯಾರಿಸುತ್ತಿರುವ ಆರ್ಯ ವೆಬ್ಸಿರೀಸ್ ಜನಪ್ರಿಯ ಡಚ್ ಕ್ರೈಂ ಡ್ರಾಮಾ ಪೆನೊಜಾದ ಅಧಿಕೃತ ರಿಮೇಕ್ ಆಗಿದೆ. ಇದು ಮಧ್ಯವಯಸ್ಕ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಉಳಿಸುವ ಹೋರಾಟದ ಸುತ್ತ ಸುತ್ತುವ ಕಥಯಾಗಿದೆ. ಆರ್ಯ ಮೊದಲ ಸೀಸನ್ 2020ರಲ್ಲಿ ಹಾಗೂ ಎರಡನೇ ಸೀಸನ್ 2021ರಲ್ಲಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿತ್ತು. ಎರಡೂ ಸೀಸನ್ಗಳು ಯಶಸ್ವಿಯಾಗಿ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ್ದವು. ಎರಡೂ ಸೀಸನ್ಗಳ ಹಿಟ್ ನಂತರ ಇತ್ತೀಚೆಗೆ ತಂಡ ಮೂರನೇ ಸೀಸನ್ ಶೂಟಿಂಗ್ ಪ್ರಾರಂಭಿಸಿದೆ.