ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ರೀನಾ ದತ್ತಾ ದಂಪತಿಯ (ವಿಚ್ಛೇದಿತ) ಪುತ್ರಿ ಇರಾ ಖಾನ್ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. 2024ರ ಜನವರಿ 3, ಅಂದರೆ ನಾಳೆ ಇರಾ ಖಾನ್ ಮತ್ತು ನೂಪುರ್ ಶಿಖರೆ ದಾಂಪತ್ಯ ಜೀವನ ಆರಂಭಿಸುವರು. ಇನ್ನೊಂದೇ ದಿನ ಬಾಕಿ ಇದ್ದು ವಧು-ವರರ ಪೋಷಕರ ನಿವಾಸದಲ್ಲಿ ಸಿದ್ಧತೆಗಳು ಪ್ರಾರಂಭವಾಗಿವೆ. ಅಮೀರ್ ಮತ್ತು ರೀನಾ ಅವರ ಮುಂಬೈ ನಿವಾಸಗಳ ಹಲವು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಮನೆಗಳು ಆಕರ್ಷಕ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ವೈರಲ್ ವಿಡಿಯೋದಲ್ಲಿ ಅಮೀರ್ ಖಾನ್ ನಿವಾಸದ ಎರಡು ಮಹಡಿಗಳು ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಕಾಣಿಸಿಕೊಂಡಿದೆ. ರೀನಾ ದತ್ತಾ ಅವರ ಮನೆ ಪುಷ್ಪಾಲಂಕಾರದಿಂದ ಜಗಮಗಿಸುತ್ತಿದೆ. ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಇರಾ ಖಾನ್ 2022ರ ನವೆಂಬರ್‌ನಲ್ಲಿ ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ನಿಶ್ಚಿತಾರ್ಥದ ನಂತರ ಸ್ಪೆಷಲ್ ಪಾರ್ಟಿ ಆಯೋಜಿಸಿದ್ದರು. ಈ ಸಮಾರಂಭಕ್ಕೆ ಬಿ-ಟೌನ್‌ನ ಖ್ಯಾತನಾಮರು ಸಾಕ್ಷಿಯಾಗಿದ್ದರು. ಮಹಾರಾಷ್ಟ್ರ ಸಂಪ್ರದಾಯದಂತೆ ಮದುವೆಗೂ ಮುನ್ನದ ಶಾಸ್ತ್ರಗಳು ನಡೆಯುತ್ತಿವೆ. ಕೆಲ್ವನ್ ಮತ್ತು ಉಖಾನ ನಡೆಸುವ ಮೂಲಕ ವಿವಾಹಪೂರ್ವ ಸಂಭ್ರಮಾಚರಣೆ ಶುರುವಾಗಿವೆ.