ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ಅವರು ಮುಂಬೈನಲ್ಲಿ ನಡೆದ ಬುಕ್ ಲಾಂಚ್ ಈವೆಂಟ್‌ವೊಂದಕ್ಕೆ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗೆ ಆಗಮಿಸಿದ್ದರು. ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ರೀನಾ ದತ್ತಾ ಮತ್ತು ಕಿರಣ್ ರಾವ್ ಉತ್ತಮ ಬಾಂಧವ್ಯ ಹೊಂದಿರುವುದನ್ನು ಕಾಣಬಹುದು.
ನಟನ ಮಾಜಿ ಪತ್ನಿಯರು ನಗುನಗುತ್ತಾ ಉತ್ತಮ ಸಮಯ ಕಳೆದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಅವರು ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಅಮೀರ್ ಖಾನ್ ಅವರಿಗೆ ಎಷ್ಟು ಹೆಂಡತಿಯರಿದ್ದಾರೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿಯೋರ್ವರು ಶೇರ್ ಮಾಡಿರುವ ವಿಡಿಯೋದಲ್ಲಿ, ರೀನಾ ದತ್ತಾ ಮತ್ತು ಕಿರಣ್ ರಾವ್ ಒಟ್ಟಿಗೆ ನಿಂತು ಮಾತನಾಡುತ್ತಾ, ನಗುತ್ತಿರುವುದನ್ನು ಕಾಣಬಹುದು. ಪಾಪರಾಜಿಯೋರ್ವರು ಒಟ್ಟಿಗೆ ಫೋಟೋ ತೆಗೆಸಿಕೊಳ್ಳುವಂತೆ ತಿಳಿಸಿದಾಗ, ಅವರು (ನಟ ಅಮೀರ್ ಖಾನ್) ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮೊದಲು ಅವರದ್ದು ಆಗಲಿ. ನಡುವೆ ನಾವು ಬಂದರೆ ಸರಿ ಎನಿಸುವುದಿಲ್ಲ ಎಂದು ನಗುತ್ತಾ ಕಿರಣ್ ರಾವ್ ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ನಟ ಅಮೀರ್ ಖಾನ್ ಅವರ ಸಂದರ್ಶನವನ್ನು ಉಲ್ಲೇಖಿಸಿ ಮಾತನಾಡಿದ ಮಾಜಿ ಪತ್ನಿ ಕಿರಣ್ ರಾವ್, ಅವರ ಇಂಟರ್ವ್ಯೂವ್ ಮುಗಿದ ಬಳಿಕ ಕ್ಯಾಮರಾಗೆ ಪೋಸ್ ನೀಡುವುದಾಗಿ ತಿಳಿಸಿದ್ದಾರೆ. ಕಿರಣ್ ರಾವ್ ಮಾತನಾಡುತ್ತಿದ್ದಂತೆ, ರೀನಾ ಅವರತ್ತ ನೋಡಿ ಮುಗುಳ್ನಕ್ಕರು. ಕಿರಣ್ ರಾವ್ ಹಸಿರು ಉಡುಪಿನ ಮೇಲೆ ನೀಲಿ ಶರ್ಟ್ ಧರಿಸಿದ್ದರೆ, ರೀನಾ ದತ್ತಾ ಉದ್ದನೆಯ ಗೆರೆಗಳ ಡ್ರೆಸ್ ಧರಿಸಿ ಆಗಮಿಸಿದ್ದರು.