ಹೈದರಾಬಾದ್: ಜನವರಿ 3ರಂದು ರಿಜಿಸ್ಟರ್ ಮದುವೆಯಾಗಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಹಾಗೂ ಆಕೆಯ ಬಹುಕಾಲದ ಗೆಳೆಯ, ಫಿಟ್ನೆಸ್ ಟ್ರೈನರ್ ನೂಪುರ್ ಶಿಖರೆ ಕಳೆದ ಗುರುವಾರ ಉದಯಪುರದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಆಪ್ತರಿಷ್ಟರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾಲ್ಕು ದಿನಗಳ ಕಾಲ ನಡೆದ ವಿವಾಹೋತ್ಸವದ ಹಲವು ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕ್ರಿಶ್ಚಿಯನ್ ಪದ್ಧತಿಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಇರಾ ಖಾನ್ ಅವರು ಬಿಳಿ ಗೌನ್ ಧರಿಸಿದ್ದರು. ವಧುವಿನ ವಸ್ತ್ರ ವಿನ್ಯಾಸಕ್ಕೆ ಒಪ್ಪುವಂಥ ಶೈಲಿ ಹಾಗೂ ಬಣ್ಣದ ಸೂಟ್ನಲ್ಲಿ ಮದುಮಗ ನೂಪರ್ ಶಿಖರೆ ಕಂಗೊಳಿಸಿದರು. ಒಂದೆಡೆ ನವಜೋಡಿಯ ಗ್ಲಿಂಪ್ಸ್ ವೈರಲ್ ಆಗುತ್ತಿದ್ದರೆ, ಇನ್ನೊಂದೆಡೆ ಅಮೀರ್ ಖಾನ್ ಹಾಗೂ ಇರಾ ಖಾನ್ ಅವರ ಭಾವನಾತ್ಮಕ ಕ್ಷಣಗಳ ಫೋಟೋಗಳು ವೈರಲ್ ಆಗುತ್ತಿವೆ.