ಇಂದು ಇಸ್ಲಾಂ ಧರ್ಮಿಯರ ಪವಿತ್ರ ಹಬ್ಬ ರಂಜಾನ್ (ಈದ್- ಉಲ್- ಫಿತಾರ್). ದೇಶದೆಲ್ಲೆಡೆ ರಂಜಾನ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಒಂದು ತಿಂಗಳ ಕಾಲ ಉಪವಾಸ ವ್ರತ ಆಚರಿಸಿದ್ದ ಮುಸ್ಲಿಮರು ಇಂದು ಸಾಮೂಹಿಕವಾಗಿ ಬಗೆ ಬಗೆಯ ಆಹಾರಗಳನ್ನು ಸೇವಿಸುವ ಮೂಲಕ ಉಪವಾಸ ವ್ರತ ಕೊನೆಗೊಳಿಸುತ್ತಾರೆ. ಸಿನಿ ತಾರೆಯರು ಕೂಡ ರಂಜಾನ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಕುಟುಂಬದವರೆಲ್ಲಾ ಜೊತೆ ಸೇರಿ ಹಬ್ಬವನ್ನು ವಿಶೇಷವಾಗಿ ಸೆಲೆಬ್ರೆಟ್ ಮಾಡುತ್ತಾರೆ.
ಬಾಲಿವುಡ್ ಸೂಪರ್ ಸ್ಟಾರ್ಗಳಾದ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಜೊತೆಯಾಗಿ ಈದ್ 2023 ಅನ್ನು ಆಚರಿಸಿದ್ದಾರೆ. ಇಬ್ಬರು ಜೊತೆಗಿರುವ ಫೋಟೋವನ್ನು ಸಲ್ಮಾನ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ 'ಚಾಂದ್ ಮುಬಾರಕ್' ಎಂದು ಶೀರ್ಷಿಕೆ ನೀಡಿದ್ದಾರೆ. ಫೋಟೋದಲ್ಲಿ ಸಲ್ಮಾನ್ ಖಾನ್ ಬ್ಲ್ಯಾಕ್ ಜೀನ್ಸ್ ಮತ್ತು ಬ್ಲ್ಯಾಕ್ ಶರ್ಟ್ ಧರಿಸಿದ್ದಾರೆ. ಮತ್ತೊಂದೆಡೆ ಅಮೀರ್ ಖಾನ್ ಬ್ಲೂ ಟಿ ಶರ್ಟ್ ಧರಿಸಿ ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಟಾರ್ ನಟ ಫೋಟೊ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಕೆಂಪು ಹೃದಯದ ಎಮೋಜಿಗಳು ಮತ್ತು ಬಗೆ ಬಗೆಯ ಬರಹಗಳಿಂದ ಕಮೆಂಟ್ ವಿಭಾಗವನ್ನು ತುಂಬಿದರು. ಅಭಿಮಾನಿಯೊಬ್ಬರು, 'ಒಂದೇ ಫ್ರೇಮ್ನಲ್ಲಿ ಇಬ್ಬರು ಲೆಜೆಂಡ್ಸ್' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಸಲ್ಮಾನ್ ಸರ್ ನೀವು ಮತ್ತು ಅಮೀರ್ ಸರ್ ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದೀರಿ. ಮಾಶಾಲ್ಲಾಹ್' ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ ಅಭಿಮಾನಿಗಳು ಅಮೀರ್ ಮತ್ತು ಸಲ್ಮಾನ್ ಅಭಿನಯದ ಸೂಪರ್ ಹಿಟ್ ಚಿತ್ರ 'ಅಂದಾಜ್ ಅಪ್ನಾ ಅಪ್ನಾ' ಸೀಕ್ವೆಲ್ಗಾಗಿ ಒತ್ತಾಯಿಸಿದರು. ಬಳಕೆದಾರರೊಬ್ಬರು, 'ಅಂದಾಜ್ ಅಪ್ನಾ ಅಪ್ನಾ 2 ಬರಲಿದೆಯಾ?' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಅಂದಾಜ್ ಅಪ್ನಾ ಅಪ್ನಾ 2 ನಮಗೆ ಬೇಕು' ಎಂದು ಕೇಳಿದ್ದಾರೆ. ನೆಟ್ಟಿಗರೊಬ್ಬರು, 'ಅಮರ್- ಪ್ರೇಮ್ ಮತ್ತೆ ಒಂದಾಗುತ್ತಾರೆ' ಎಂದು ಹೇಳಿದ್ದಾರೆ. ಇನ್ನೊಬ್ಬರು, 'ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರ ಅಂದಾಜ್ ಅಪ್ನಾ ಅಪ್ನಾ 2 ಖಂಡಿತ ಆಗುತ್ತೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.