ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತ ಕುಟುಂಬಗಳಿಗೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಹಣಕಾಸು ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಅಮೀರ್ ಖಾನ್ 25 ಲಕ್ಷ ರೂ. ನೆರವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನಟನಿಗೆ ಕೃತಜ್ಞತೆ ಸಲ್ಲಿಸಿದ ಸುಖ್ವಿಂದರ್ ಸಿಂಗ್ ಸುಖು, ಅಮೀರ್ ಖಾನ್ ಅವರ ಹಣಕಾಸು ನೆರವು ಪುನರ್ವಸತಿ ಕಾರ್ಯಗಳಿಗೆ ಬಳಕೆಯಾಗಲಿದೆ. ದುರಂತದ ಪರಿಣಾಮ ಎದುರಿಸುತ್ತಿರುವ ಸಂತ್ರಸ್ತ ಕುಟುಂಬಗಳು ಚೇತರಿಸಿಕೊಳ್ಳಲು ಸಹಾಯ ಮಾಡುವುದು ಅವರ ಪ್ರಮುಖ ಉದ್ದೇಶವಾಗಿದೆ. ಈ ನೆರವು ಅಗತ್ಯವಿರುವ ಜನರಿಗೆ ತಲುಪುತ್ತದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಉಂಟಾದ ನೈಸರ್ಗಿಕ ವಿಕೋಪಗಳಿಂದ ಸಂತ್ರಸ್ತರಾದವರ ಜೀವನದಲ್ಲಿ ಅಮೀರ್ ಖಾನ್ ಸಹಾಯ ಗಮನಾರ್ಹ ಬದಲಾವಣೆ ತರಲಿದೆ ಎಂದು ಹೇಳಿದ್ದಾರೆ.
ಅಮೀರ್ ಖಾನ್ ಸದ್ಯ ಸಿನಿಮಾಗಳಿಂದ ವಿರಾಮ ಪಡೆದಿದ್ದಾರೆ. ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಸಾರ್ವಜನಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರ ಮಗಳು ಇರಾ ಖಾನ್ ತಮ್ಮ ಗೆಳೆಯ ನೂಪುರ್ ಶಿಖರೆ ಎಂಬವರನ್ನು ಮದುವೆ ಆಗುತ್ತಿದ್ದಾರೆ. ಅದ್ಧೂರಿ ವಿವಾಹದ ತಯಾರಿಯಲ್ಲಿ ನಟ ನಿರತರಾಗಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, 'ಮಿಸ್ಟರ್ ಪರ್ಫೆಕ್ಷನಿಸ್ಟ್' ಮುಂಬರುವ ಪ್ರೊಜೆಕ್ಟ್ ಸಲುವಾಗಿ ನಿರ್ದೇಶಕರು, ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳಿವೆ.