ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಪುತ್ರಿಯ ವಿವಾಹಕ್ಕೆ ಸಿದ್ಧತೆ ನಡೆದಿದೆ. ವಿವಾಹಕ್ಕೆ ದಿನಗಣನೆ ಆರಂಭವಾಗಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಇರಾ ಖಾನ್ ಅವರು ನೂಪುರ್ ಶಿಖರೆ ಅವರೊಂದಿಗೆ 2024ರ ಜನವರಿ 3ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಇರಾ ಖಾನ್ ಗೆಳೆಯ ನೂಪುರ್ ಶಿಖರೆ ಅವರೊಂದಿಗೆ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎರಡು ತಿಂಗಳ ನಂತರ ಆಪ್ತರಿಗಾಗಿ ಸ್ಪೆಷಲ್ ಪಾರ್ಟಿ ಇಟ್ಟುಕೊಂಡಿದ್ದರು. ಈ ಖಾಸಗಿ ಕಾರ್ಯಕ್ರಮದಲ್ಲಿ ಇಮ್ರಾನ್ ಖಾನ್, ಅಮೀರ್ ಖಾನ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಮತ್ತು ನಟಿ ಫಾತಿಮಾ ಸನಾ ಶೇಖ್ ಸೇರಿದಂತೆ ಕೆಲವರು ಕಾಣಿಸಿಕೊಂಡಿದ್ದರು. ಸದ್ಯ ಮದುವೆ ದಿನ ಸಮೀಪಿಸುತ್ತಿದೆ. ವಿವಾಹದ ಸಂಬಂಧ ಮಾಹಿತಿಗಳು ಹೊರಬೀಳುತ್ತಿವೆ.
ಮದುವೆಗೆ ಇನ್ನೊಂದು ವಾರವೂ ಕೂಡ ಬಾಕಿ ಉಳಿದಿಲ್ಲ. ಇರಾ ಖಾನ್ ಹಾಗೂ ನೂಪುರ್ ಶಿಖರೆ ಈಗಾಗಲೇ ಮದುವೆ ಮುನ್ನದ ಶಾಸ್ತ್ರ, ಆಚರಣೆಗಳನ್ನು ಆರಂಭಿಸಿದ್ದಾರೆ. ಮಹಾರಾಷ್ಟ್ರದ ಸಂಪ್ರದಾಯವನ್ನು ಪಾಲಿಸಿ ಜನವರಿ 3ರಂದು ಮದುವೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಸೂಪರ್ ಸ್ಟಾರ್ ಅಮೀರ್ ಖಾನ್ ತಮ್ಮ ಮಗಳ ಮದುವೆ ಸಂಭ್ರಮದೊಂದಿಗೆ 2024ನೇ ವರ್ಷವನ್ನು ಆರಂಭಿಸಲು ಸಜ್ಜಾಗಿದ್ದಾರೆ.
ಆಪ್ತ ಮೂಲಗಳ ಪ್ರಕಾರ, ಇರಾ ಮತ್ತು ನೂಪುರ್ ಬಾಂದ್ರಾದಲ್ಲಿನ ರಾಯಲ್ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ಮದುವೆ ಆಗಲಿದ್ದಾರೆ. ಜನವರಿ 6ರಿಂದ 10ರ ನಡುವೆ, ಎರಡು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಿದ್ದಾರೆ. ದೆಹಲಿ ಮತ್ತು ಜೈಪುರದಲ್ಲಿ ರಿಸೆಪ್ಷನ್ ಪಾರ್ಟಿ ನಡೆಯಲಿದೆ.