ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಮಾನಸಿಕ ಆರೋಗ್ಯಕ್ಕಾಗಿ ತಜ್ಞರ ಸಹಾಯ ಪಡೆಯುವುದರ ಹಿಂದಿನ ಪ್ರಾಮುಖ್ಯತೆ ಬಗ್ಗೆ ಸಂದರ್ಶನಗಳಲ್ಲಿ ಬೆಳಕು ಚೆಲ್ಲುತ್ತಾರೆ. ಇಂದು ವಿಶ್ವ ಮಾನಸಿಕ ಆರೋಗ್ಯ ದಿನ. ಈ ಹಿನ್ನೆಲೆ ಇರಾ ಖಾನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಮೀರ್ ಖಾನ್ ಕೂಡ ಮಗಳೊಂದಿಗೆ ಸೇರಿ ಮಾತನಾಡಿದ್ದಾರೆ. ಯೋಗಕ್ಷೇಮಕ್ಕಾಗಿ ತಜ್ಞರ ಸಹಾಯ ಪಡೆಯೋದು ಮುಜುಗರದ ವಿಷಯ ಅಲ್ಲ ಎಂಬುದನ್ನು ತಂದೆ ಮಗಳು ತಿಳಿಸಿದ್ದು ಅನೇಕರಿಗೆ ಸ್ಫೂರ್ತಿಯಾಗಿದೆ.
ಹೆಚ್ಚು ಬಳಕೆಯಾಗುವ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ಅಮೀರ್ ಖಾನ್ ಮತ್ತು ಇರಾ ಖಾನ್ ನಿತ್ಯದ ವಿಷಯಗಳನ್ನು ಉದಾಹಣೆ ಆಗಿ ಕೊಟ್ಟಿದ್ದಾರೆ. ಗಣಿತ ಕಲಿಯಲು ಶಾಲೆಗೆ ಹೇಗೆ ಹೋಗುತ್ತೇವೆ, ಹೇರ್‌ಕಟ್‌ಗಾಗಿ ಸಲೂನ್‌ಗೆ ಹೇಗೆ ಹೋಗುತ್ತೇವೆ, ಮನೆಯ ಕೆಲ ಅಡೆತಡೆಗಳನ್ನು ಸರಿಪಡಿಸಲು ಪ್ಲಂಬರ್‌ಗಳು ಅಥವಾ ಕಾರ್ಪೇಂಟರ್ಸ್ಗಳನ್ನು ಹೇಗೆ ಕರೆಯುತ್ತೇವೆ, ದೈಹಿಕ ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ವೈದ್ಯರನ್ನು ಹೇಗೆ ಭೇಟಿ ಮಾಡುತ್ತೇವೆ ಎಂಬುದರ ಕುರಿತು ಮಾತನಾಡಿದರು. ಏಕೆಂದರೆ, ಇದೇ ರೀತಿ ಮಾನಸಿಕ ಆರೋಗ್ಯಕ್ಕಾಗಿ ಮುಜುಗರ ಮಾಡಿಕೊಳ್ಳದೇ ತಜ್ಞರ ಸಹಾಯ ಪಡೆಯೋದು ಕೂಡ ಅತ್ಯಗತ್ಯ ಎಂಬುದನ್ನು ತಂದೆ ಮಗಳು ಒತ್ತಿ ಹೇಳಿದರು.
'ನಮ್ಮ ಜೀವನದಲ್ಲಿ ನಾವೇ ಸ್ವತಃ ಮಾಡಲಾಗದ ಹಲವು ಕಾರ್ಯಗಳಿವೆ. ಅದಕ್ಕಾಗಿ ನಮಗೆ ಇತರರ, ವಿಶೇಷವಾಗಿ ಆ ಕೆಲಸದಲ್ಲಿ ಪರಿಣಿತರಾದವರ ಸಹಾಯ ಬೇಕಾಗುತ್ತದೆ. ಅಷ್ಟೇ ಅಲ್ಲದೇ, ನಾವು ಈ ನಿರ್ಧಾರಗಳನ್ನು (ಸಹಾಯ ತೆಗೆದುಕೊಳ್ಳುವುದರ) ಯಾವುದೇ ಮುಜುಗರ ಪಡೆಯದೇ ಸುಲಭವಾಗಿ ಮಾಡುತ್ತೇವೆ' ಎಂದು ಅಮೀರ್ ಖಾನ್ ಹೇಳಿದ್ದಾರೆ.