ಅನಾರೋಗ್ಯ ನಡುವೆಯೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ರಾಘವೇಂದ್ರ ರಾಜ್ಕುಮಾರ್. ನಟ ರಾಘವೇಂದ್ರ ರಾಜ್ ಕುಮಾರ್ ಹಾಗು ಸ್ಪರ್ಶ ರೇಖಾ ಮುಖ್ಯ ಭೂಮಿಕೆಯಲ್ಲಿರುವ ಆಧುನಿಕ ಶ್ರವಣಕುಮಾರ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಹಿರಿಯ ಹಾಗೂ ಅನುಭವಿ ಕಲಾವಿದರ ತಾರಾಬಳಗ ಇರುವ ಈ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
'ಆಧುನಿಕ ಶ್ರವಣಕುಮಾರ' ಚಿತ್ರಕಥೆ:ಸರ್ಕಾರಿ ಶಾಲೆ ಉಳಿಸಬೇಕು ಎಂದು ಪಣ ತೊಡುವ ಹಾಗೂ ಸ್ನೇಹಿತರ ಜೊತೆಗಿನ ಬಾಂಧವ್ಯವನ್ನು ಸಾರುವ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ 'ಆಧುನಿಕ ಶ್ರವಣಕುಮಾರ'. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಕೃಷ್ಣ ಕೆ.ಎಸ್ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಮನೋರಂಜನೆ ಜೊತೆಗೆ ಸಂದೇಶ:ನಿರ್ದೇಶಕ ಕೃಷ್ಣ ಕೆ. ಎಸ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಕೋವಿಡ್ಗೂ ಮೊದಲೇ ಅಪ್ಪು ಸರ್ ಇದ್ದಾಗಲೇ ರಾಘಣ್ಣ ಅವರಿಗೆ ಕಥೆ ಹೇಳಿದ್ದೆ. ತುಂಬಾ ಖುಷಿಯಿಂದ ಒಪ್ಪಿಕೊಂಡ್ರು. ಹಲವು ಹಿರಿಯ ನಟರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜೊತೆಗೆ ಸರ್ಕಾರಿ ಶಾಲೆ ಉಳಿವಿನ ವಿಚಾರವೂ ನಮ್ಮ ಈ ಚಿತ್ರದಲ್ಲಿದೆ. ಮನೋರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ಈ ಚಿತ್ರ ನೀಡಲಿದೆ ಎಂದು ತಿಳಿಸಿದರು.
'ಅಪ್ಪು ಬಿಟ್ಟು ಹೋದ ಮೇಲೆ ಮಾಡಿದ ಮೊದಲ ಸಿನಿಮಾ':ಬಳಿಕ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, ಇದು ನನ್ನ ಸಿನಿಮಾ ಅಲ್ಲ. ಈ ಚಿತ್ರದಲ್ಲಿ ನಾನು ಒಂದು ಪಾತ್ರ ಅಷ್ಟೇ. ನಾಲ್ಕು ಜನ ಸ್ನೇಹಿತರು ಇರುತ್ತಾರೆ. ಅವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಅವರಿಗೆ ಸ್ನೇಹಿತನೇ ಸಮಸ್ಯೆ ಆದಾಗ ಹೇಗೆ ಅದನ್ನು ಸರಿ ಪಡಿಸಿಕೊಳ್ಳುತ್ತಾನೆ ಅನ್ನೋದು ಈ ಚಿತ್ರದ ಎಳೆ. ತುಂಬಾ ಇಷ್ಟವಾದ ಪಾತ್ರ ಮಾಡಿದ್ದೇನೆ. ಅಪ್ಪು ಬಿಟ್ಟು ಹೋದ ಮೇಲೆ ಮಾಡಿದ ಮೊದಲ ಸಿನಿಮಾ ಇದು ಎಂದು ಹೇಳಿದರು.