ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಹೊಂದಿರುವ 'ಆಡೇ ನಮ್ ಗಾಡ್' ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಒಂದೊಳ್ಳೆ ಸಂದೇಶದೊಂದಿಗೆ ಹಾಸ್ಯಮಯ ಕಥೆ ಹೆಣೆದಿದ್ದಾರೆ ಹಿರಿಯ ನಿರ್ದೇಶಕ ಪಿ.ಹೆಚ್ ವಿಶ್ವನಾಥ್. ರಾಮಾ ರಾಮಾ ರೇ ಸಿನಿಮಾದ ನಟರಾಜ್ ಅಭಿನಯದ ಆಡೇ ನಮ್ ಗಾಡ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.
ಪ್ರೇಕ್ಷಕರಿಗೆ ಕಥೆ ಹಿಡಿಸಲಿದೆ..ನಿರ್ದೇಶಕ ಪಿಹೆಚ್ ವಿಶ್ವನಾಥ್ ಮಾತನಾಡಿ, ಸಿನಿಮಾ ಮಾಡಿದ ಮೇಲೆ ಸಿನಿಮಾದ ಕುರಿತು ನಿರ್ದೇಶಕರು ಮಾತನಾಡುವುದು ಏನೂ ಇರುವುದಿಲ್ಲ. ಸಿನಿಮಾನೇ ಏನಾದರೂ ಹೇಳಬೇಕು. ಇಂದಿನ ಟ್ರೆಂಡ್ಗೆ ಹೊಂದುವ ಸಿನಿಮಾ ಇದು. ಇಂದಿನ ಪ್ರೇಕ್ಷಕರಿಗೆ ಕಥೆ ಹಿಡಿಸಲಿದೆ. ಗಂಭೀರ ವಿಷಯವನ್ನು ಲಘು ಹಾಸ್ಯದೊಂದಿಗೆ ಹೇಳಿದ್ದೇವೆ. ಹೊಸ ಹುಡುಗರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಇವರು ಏನು ಮಾಡಿದ್ದಾರೆ ಎಂಬ ಕುತೂಹಲದಿಂದ ಪ್ರೇಕ್ಷಕರು ಬಂದು ಸಿನಿಮಾ ನೋಡಬೇಕು ಎಂದು ತಿಳಿಸಿದರು.
ನಟರಾಜ್ ಮಾತನಾಡಿ, ನನ್ನದು ಓರ್ವ ಮಧ್ಯವರ್ತಿಯ ಪಾತ್ರ. ಅವನು ಮಾಡದ ಕೆಲಸವಿಲ್ಲ. ಸರ್ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿಯತ್ತನ್ನು ನಂಬಿಕೊಂಡಿರುವ ಪಾತ್ರ ಇದು. ಒಂದೊಳ್ಳೆ ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕ ಪಿ ಹೆಚ್ ವಿಶ್ವನಾಥ್ ಸರ್ಗೆ ಧನ್ಯವಾದ. ಸಂಭಾಷಣೆ ಬರೆಯಲು ಸಹ ಅವಕಾಶ ಸಿಕ್ಕಿದೆ. ತುಂಬಾ ಖುಷಿ ಕೊಟ್ಟ ಪಯಣವಿದು ಎಂದು ತಿಳಿಸಿದರು.
ಸಮಾಜಕ್ಕೆ ಒಂದೊಳ್ಳೆ ಸಂದೇಶ.. ನಿರ್ಮಾಪಕ ಬಿ ಬಸವರಾಜ್ ಮಾತನಾಡಿ, ನಾನು ನಿವೃತ್ತ ಪ್ರೊಫೆಸರ್. ನಿರ್ದೇಶಕ ಪಿ ಹೆಚ್ ವಿಶ್ವನಾಥ್ ಅವರ ಪರಿಚಯವಾದಾಗ ಹೊಸ ಆಸೆ ಹುಟ್ಟಿತ್ತು. ಸಿನಿಮಾ ಮಾಡಬೇಕು ಎಂದು ಅನಿಸಿತ್ತು. ಇದೀಗ ಬಹಳ ಸಂತೋಷವಾಗುತ್ತಿದೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಟ್ಟರೆ ನನ್ನ ವೃತ್ತಿ ಜೀವನ ಸಾರ್ಥಕವಾಗುತ್ತದೆ ಎನ್ನುವ ಉದ್ದೇಶದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದರು.