ಆಕಾಶದ ನಕ್ಷತ್ರಕ್ಕೆ 'ಅಪ್ಪು' ಹೆಸರು.. ಬಿಗ್ ಲಿಟ್ಲ್ ಕಂಪನಿ ಜೊತೆ ವಿಕ್ರಮ್ ಸಾಥ್ ಅಭಿಮಾನಿಗಳ ರಾಜರತ್ನ, ಚಂದನವನದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದು ನಮ್ಮೊಂದಿಗಿಲ್ಲದಿದ್ದರೂ ಸಹ ಅವರನ್ನು ಸದಾ ನೆನೆಯುತ್ತೇವೆ. ಕರ್ನಾಟಕ ರತ್ನ ಅಪ್ಪು ಒಂದು ವೇಳೆ ಬದುಕಿರುತ್ತಿದ್ದರೆ ಮಾರ್ಚ್ 17 ರಂದು ತಮ್ಮ ಹುಟ್ಟುಹಬ್ಬವನ್ನು ಸಾವಿರಾರು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಕ್ರೂರ ವಿಧಿ ಪರಮಾತ್ಮನನ್ನು ಕರೆದೊಯ್ದು ಒಂದೂವರೆ ವರ್ಷ ಉರುಳಿದೆ.
ಆದರೆ ಅಪ್ಪು ಸಮಾಜಕ್ಕಾಗಿ ಮಾಡಿದ ಸಹಾಯಗಳು ಇಂದಿಗೂ ಎಲ್ಲರ ಮನಸ್ಸಲ್ಲೂ ಅಚ್ಚಳಿಯದೇ ಉಳಿದುಬಿಟ್ಟಿದೆ. ಬೆಟ್ಟದ ಹೂವು ಬಗ್ಗೆ ಅಭಿಮಾನಿಗಳು ಅಲ್ಲದೇ ಸಿನಿಮಾ ಸೆಲೆಬ್ರಿಟಿಗಳಿಂದ ಹಿಡಿದು ಗಣ್ಯ ವ್ಯಕ್ತಿಗಳು ಅವರು ಮಾಡಿರುವ ಸಮಾಜ ಕಾರ್ಯಗಳ ಬಗ್ಗೆ ಕೊಂಡಾಡುತ್ತಿದ್ದಾರೆ. ಅದರಂತೆ ಇದೀಗ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ 'ಬಿಗ್ ಲಿಟ್ಲ್' ಕಂಪನಿಯು ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಸೇರಿ ವಿಶೇಷವಾದ ವಿಡಿಯೋ ಮೂಲಕ ಗೌರವ ಸಲ್ಲಿಸಿದೆ.
ವಿಕ್ರಮ್ ರವಿಚಂದ್ರನ್ ಅವರು ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸುವ ವಿಡಿಯೋ ಬಿಡುಗಡೆ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. "ಪುನೀತ್ ರಾಜ್ಕುಮಾರ್ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತದೆ. ನಾನು ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಸಿನಿಮಾದ ಆಚೆಗಿನ ಅವರ ಜೀವನ ಜಗತ್ತಿಗೆ ಸ್ಪೂರ್ತಿ. ಅವರಿಗಾಗಿ ಮಾಡುತ್ತಿರುವ ಒಂದೊಳ್ಳೆ ಕೆಲಸದಲ್ಲಿ ನಾನು ಭಾಗಿಯಾಗಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸೆಲೀನ ಗೊಮೆಜ್‌ಗೆ 400 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್! ಈ ಸಾಧನೆ ಮಾಡಿದ ಮೊದಲ ಮಹಿಳೆ
"ನಮ್ಮ ಕಾಲದ ಅತ್ಯುತ್ತಮ ಸ್ಫೂರ್ತಿಗೆ ಒಂದು ಚಿಕ್ಕ ಗೌರವ ನೀಡುವ ಸಲುವಾಗಿ ಆಕಾಶದಲ್ಲಿರುವ ನಕ್ಷತ್ರವೊಂದಕ್ಕೆ ಪುನೀತ್ ರಾಜ್ಕುಮಾರ್ ಹೆಸರಿಡಲು ಹೆಮ್ಮೆಯಾಗಿದೆ" ಎಂದು ಬಿಗ್ ಲಿಟ್ಲ್ ಕಂಪನಿ ತಿಳಿಸಿದೆ. ಬಿಗ್ ಲಿಟ್ಲ್ ಕಂಪನಿ ಸಂಸ್ಥಾಪಕಿ ಕಾವ್ಯ ಶಂಕರೇಗೌಡ ಮಾತನಾಡಿ "ಪುನೀತ್ ರಾಜ್ಕುಮಾರ್ ಎಲ್ಲರಿಗೂ ಸ್ಪೂರ್ತಿ. ಬಿಗ್ ಲಿಟ್ಲ್ ಕಂಪನಿ ಅವರಿಂದ ತುಂಬಾ ಕಲಿತಿದೆ. ನಕ್ಷತ್ರಗಳು ನಮ್ಮ ಮಾರ್ಗದರ್ಶಿ ಶಕ್ತಿಯಾಗಿರುತ್ತೆ ಎಂಬ ಕಲ್ಪನೆಯಡಿ ನಾವು ಮಾಡಿರುವ ಕಾನ್ಸೆಪ್ಟ್ ಮೂಡಿ ಬಂದಿದೆ. ನಮ್ಮ ಪ್ರೀತಿ ಪಾತ್ರರು ದೂರವಾದಾಗ ನಕ್ಷತ್ರಗಳಾಗುತ್ತಾರೆ ಎಂದು ನಾವು ನಂಬಿದ್ದೇವೆ. ಅಪ್ಪು ಸರ್ ನಮಗೆಲ್ಲ ಸ್ಟಾರ್ ಆಗಿದ್ದರು, ಅವರ ಹೆಸರಲ್ಲಿ ಒಂದು ನಕ್ಷತ್ರ ಇರಬೇಕೆಂದು ನಾವು ಬಯಸುತ್ತೇವೆ. ನಮ್ಮೆಲ್ಲರ ಅತ್ಯುತ್ತಮ ಸ್ಪೂರ್ತಿಯ ಶಕ್ತಿಗೆ ಇದು ನಮ್ಮ ಚಿಕ್ಕ ಕೊಡುಗೆ" ಎಂದು ತಿಳಿಸಿದ್ದಾರೆ.
ಬಿಗ್ ಲಿಟ್ಲ್ ಕಂಪನಿ ಬಿಡುಗಡೆ ಮಾಡಿರುವ ಅಪ್ಪುಗೆ ಗೌರವ ಸಲ್ಲಿಸುವ ಈ ವಿಡಿಯೋ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಖತ್ ವೈರಲ್ ಆಗಿದ್ದು, ವಿಕ್ರಮ್ ರವಿಚಂದ್ರನ್ ಹಾಗೂ ಬಿಗ್ ಲಿಟ್ಲ್ ತಂಡಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಾ ಇದೆ. ಜೊತೆಗೆ ಇಂತಹ ಒಂದು ಉತ್ತಮ ನಿರ್ಧಾರಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:50 ದೇಶ, 5 ಭಾಷೆ: ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ 'ಕಬ್ಜ'