ಮಹಾರಾಷ್ಟ್ರ ರಾಜ್ಯದ ಪುಣೆಯ ರಾಜ್‌ಬಹದ್ದೂರ್ ಮಿಲ್ಸ್ ಬಳಿಯ ವಿಶಾಲವಾದ ಬಯಲು ಪ್ರದೇಶದಲ್ಲಿ ಭಾನುವಾರ ಸಂಜೆ ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮ ನಡೆದಿತ್ತು. ಸಮಯದ ಮಿತಿ ಕಾರಣ ನೀಡಿ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಚಲೆ ಚಯ್ಯಾ, ಚಯ್ಯಾ ಹಾಡಿನ ಪ್ರದರ್ಶನ ವೇಳೆಯೇ ವೇದಿಕೆ ಮೇಲೆ ಬಂದ ಪೊಲೀಸ್ ಅಧಿಕಾರಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಸೂಚಿಸಿದ್ದರು.
ಈ ಘಟನೆ ಬಗ್ಗೆ ಸಂಗೀತ ಸಂಯೋಜಕ ಎ.ಆರ್ ರೆಹಮಾನ್ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿದ್ದಾರೆ. ಪರಿಸ್ಥಿತಿಗೆ ಪ್ರತಿಕ್ರಿಯಿಸಿಸಲು ಎಆರ್ ರೆಹಮಾನ್ ಸೋಮವಾರದಂದು, ಇತರ ಸಂಗೀತಗಾರರು ಮತ್ತು ಗಾಯಕರೊಂದಿಗೆ ವೇದಿಕೆಯಲ್ಲಿ ಲೈವ್ ಪ್ರದರ್ಶನ ನೀಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಆಸ್ಕರ್ ವಿಜೇತ ಗಾಯಕ ಹಂಚಿಕೊಂಡಿರುವ ವಿಡಿಯೋದಲ್ಲಿ ವೇದಿಕೆಯ ಮೇಲೆ ಪೊಲೀಸ್ ಅಧಿಕಾರಿ ಬಂದು ಸಂಗೀತ ಕಾರ್ಯಕ್ರಮವನ್ನು ತಕ್ಷಣವೇ ನಿಲ್ಲಿಸುವಂತೆ ಎಆರ್ ರೆಹಮಾನ್ ಅವರನ್ನು ಕೇಳಿಕೊಳ್ಳುವುದನ್ನು ನಾವು ನೋಡಬಹುದು. ವಿಡಿಯೋ ಶೇರ್ ಮಾಡಿದ ರೆಹಮಾನ್, "ಎಲ್ಲಾ ಪ್ರೀತಿ ಮತ್ತು ಸಂಭ್ರಮಕ್ಕಾಗಿ ಪುಣೆ ಜನತೆಗೆ ಧನ್ಯವಾದಗಳು'' ಎಂದು ಬರೆದಿದ್ದಾರೆ.
"ನಾವೆಲ್ಲರೂ ನಿನ್ನೆ ವೇದಿಕೆಯಲ್ಲಿ 'ರಾಕ್‌ಸ್ಟಾರ್' ಕ್ಷಣವನ್ನು ಅನುಭವಿಸಿದ್ದೇವೆಯೇ?, ನಾವು ಅನುಭವಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಪ್ರೇಕ್ಷಕರ ಭಕ್ತಿ ನಮ್ಮನ್ನು ಆವರಿಸಿತು, ನಾವು ಹೆಚ್ಚಿನದನ್ನು ನೀಡಲು ಬಯಸಿದೆವು. ಇಂತಹ ವಿಶೇಷ ಸಂಜೆಗಾಗಿ ಧನ್ಯವಾದಗಳು'' ಎಂದು ಎ.ಆರ್ ರೆಹಮಾನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಪುಣೆಯಲ್ಲಿ ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ.. ಕಾರಣ?
ರೆಹಮಾನ್ ಟ್ವೀಟ್ಗೆ ಅಭಿಮಾನಿಗಳು ಕಾಮೆಂಟ್ ಸೆಕ್ಷನ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂಬರ್ಥದಲ್ಲಿ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ನೀವು ಆ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ನನ್ನ ಸೆಲ್ಯೂಟ್, ನಿಮ್ಮಿಂದ ಕಲಿಯುವುದು ಬಹಳವಿದೆ, ನಮ್ಮ ಅತ್ಯಂತ ಪ್ರೀತಿಯ ರಾಕ್‌ಸ್ಟಾರ್'' ಎಂದು ಬರೆದಿದ್ದಾರೆ.
ಇದನ್ನೂ ಓದಿ:ಮೇ 13ಕ್ಕೆ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ನಿಶ್ಚಿತಾರ್ಥ
ಘಟನೆ: ಭಾನುವಾರ ಸಂಜೆ (30/4/23) ಪುಣೆಯಲ್ಲಿ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜ್‌ಬಹದ್ದೂರ್ ಮಿಲ್ಸ್ ಬಳಿ ಪ್ರೋಗ್ರಾಮ್ ನಡೆಯುತ್ತಿತ್ತು. . ಎಆರ್ ರೆಹಮಾನ್ ಮತ್ತು ಅವರ ತಂಡ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣಬಡಿಸಿತ್ತು. ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯ ಜನರು ಆಗಮಿಸಿ ಮನೋರಂಜನೆ ಪಡೆಯುತ್ತಿದ್ದರು. ರೆಹಮಾನ್ ಅವರೇ ನಿರ್ದೇಶಿಸಿದ್ದ, ಸಾಕಷ್ಟು ಜನಪ್ರಿಯತೆ ಗಳಿಸಿರುವ ಚಯ್ಯಾ, ಚಯ್ಯಾ ಹಾಡಿನ ಪ್ರದರ್ಶನ ಆಗುತ್ತಿದ್ದ ವೇಳೆಯೇ ಪೊಲೀಸ್ ಅಧಿಕಾರಿ ವೇದಿಕೆ ಮೇಲೆ ಬಂದರು. ರಾತ್ರಿ 10 ಗಂಟೆ ಮೇಲೆ ಸದ್ದು ಮಾಡುವುದು ನಿಷೇಧವಿರುವ ಕಾರಣ ಪೊಲೀಸ್ ಈ ನಿಯಮವನ್ನು ರೆಹಮಾನ್ ಅವರಿಗೆ ತಿಳಿ ಹೇಳಿದರು. ಬಳಿಕ ಮಾತುಕತೆ ನಡೆದು ಕಾರ್ಯಕ್ರಮವನ್ನು ಅಲ್ಲಿಗೆ ನಿಲ್ಲಿಸಲಾಯಿತು. ಈ ಹಿನ್ನೆಲೆ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.