ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಮಿಸ್ಟರ್ ಪರ್ಫೆಕ್ಷನಿಸ್ಟ್ ಆಫ್ ಬಾಲಿವುಡ್' 58 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡಿ ಭಾರತ ಚಿತ್ರರಂಗದ ಫೇಮಸ್ ನಟರಲ್ಲಿ ಒಬ್ಬರಾಗಿದ್ದಾರೆ. 1965 ರಲ್ಲಿ ಜೀನತ್ ಹುಸೇನ್ ಮತ್ತು ಮೊಹಮ್ಮದ್ ಅಮೀರ್ ಹುಸೇನ್ ಖಾನ್ ದಂಪತಿಗೆ ಜನಿಸಿದ ಅಮೀರ್, ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿ, ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎಎಸಿಟಿಎ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಲ್ಲದೇ 2003 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2010 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಅಮೀರ್ ಖಾನ್ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಅವರಿಂದು ಬಾಲಿವುಡ್ನ ಮೇರು ನಟರಾಗಿದ್ದಾರೆ. ಅವರ ಕೆಲವೊಂದು ಹಿಟ್ ಸಿನಿಮಾಗಳು ಈ ಕೆಳಗಿನಂತಿದೆ.
ಸರ್ಪರೋಶ್: 1999 ರ ಆಕ್ಷನ್ ಡ್ರಾಮಾ ಚಲನಚಿತ್ರ ಸರ್ಪರೋಶ್ ಆಗಿದೆ. ಜಾನ್ ಮ್ಯಾಥೂ ಕಥೆ ಬರೆದು ನಿರ್ದೇಶಿಸಿದ್ದಾರೆ. ಅಮೀರ್ ಖಾನ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ನಾಸಿರುದ್ಧೀನ್ ಶಾ, ಸೋನಾಲಿ ಬೆಂದ್ರೆ, ಮುಕೇಶ್ ರಿಷಿ, ಶ್ರೀ ವಲ್ಲಭ ವ್ಯಾಸ, ಪ್ರದೀಪ್ ರಾವತ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಲಗಾನ್: ಅಮೀರ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಲಗಾನ್ ಸಿನಿಮಾ 2001 ರಲ್ಲಿ ತೆರಕಂಡಿತು. ಈ ಚಿತ್ರವನ್ನು ಅಶುತೋಷ್ ಗೋವಾರಿಕರ್ ಬರೆದು ನಿರ್ದೇಶಿಸಿದ್ದಾರೆ. ಅಲ್ಲದೇ ಸ್ವತಃ ಅಮೀರ್ ಖಾನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಲಗಾನ್ ಅತಿ ಹೆಚ್ಚು ಗಳಿಕೆಯೊಂದಿಗೆ ಮೆಚ್ಚುಗೆ ಪಡೆದುಕೊಂಡಿತು. ಈ ಸಿನಿಮಾವು ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು.